ಅಲಿಗಢ: ಕಲುಷಿತ ಆಹಾರ ಸೇವಿಸಿ ಅಸ್ವಸ್ಥರಾದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ 300 ಮಂದಿ ವಿದ್ಯಾರ್ಥಿನಿಯರನ್ನು ಬುಧವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ರಾತ್ರಿ ಹಾಸ್ಟೆಲ್ ಊಟ ಸೇವನೆ ಬಳಿಕ ವಿದ್ಯಾರ್ಥಿಗಳಲ್ಲಿ ಅನಾರೋಗ್ಯ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಜವಹರಲಾಲ್ ನೆಹರೂ ಮೆಡಿಕಲ್ ಕಾಲೇಜಿಗೆ ವಿದ್ಯಾರ್ಥಿನಿಯರನ್ನು ದಾಖಲಿಸಲಾಗಿದ್ದು, ಮಧ್ಯಾಹ್ನದ ವೇಳೆಗೆ ಬಹುಪಾಲು ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಅಸ್ವಸ್ಥಗೊಂಡ ವಿದ್ಯಾರ್ಥಿನಿಯರು ಬೆಳಿಗ್ಗೆಯಿಂದಲೇ ಆಸ್ಪತ್ರೆಯತ್ತ ಬರಲಾರಂಭಿಸಿದರು. ನಾವು 300 ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ನೀಡಿದ್ದೇವೆ. ಅವರ ಆರೋಗ್ಯದಲ್ಲಿ ಸುಧಾರಣೆ ಕಂಡ ಬಳಿಕ ಬಿಡುಗಡೆ ಮಾಡಿದ್ದೇವೆ. ಎಲ್ಲಾ ವಿದ್ಯಾರ್ಥಿನಿಯರ ಆರೋಗ್ಯದ ಮೇಲೆ ನಿಗಾ ಇರಿಸಿದ್ದೇವೆ’ ಎಂದು ಆಸ್ಪತ್ರೆಯ ಮುಖ್ಯ ಮೇಲ್ವಿಚಾರಕ ಡಾ. ಹ್ಯಾರಿಸ್ ಮನ್ಸೂರ್ ಖಾನ್ ಹೇಳಿದ್ದಾರೆ.
ಇವರೆಲ್ಲರೂ ವಿಶ್ವವಿದ್ಯಾನಿಲಯದ ಬೇಗಂ ಅಜೀಜುನ್ ನಿಶಾ ಹಾಲ್‌ನಲ್ಲಿ (ಮಹಿಳಾ ಹಾಸ್ಟೆಲ್) ವಾಸ ಮಾಡುತ್ತಿದ್ದರು.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಜಿಲ್ಲೆಯ ಆರೋಗ್ಯ ಅಧಿಕಾರಿಗಳ ತಂಡ, ಹಾಸ್ಟೆಲ್‌ನ ಅಡುಗೆ ಕೋಣೆಯಲ್ಲಿ ಇರಿಸಲಾಗಿದ್ದ ಆಹಾರಗಳ ಸ್ಯಾಂಪಲ್‌ಗಳನ್ನು ಪಡೆದುಕೊಂಡು ಪರೀಕ್ಷೆಗೆ ಕಳುಹಿಸಿದ್ದಾರೆ.
ಮೂರು ಸದಸ್ಯರ ಸಮಿತಿ ಈ ಬಗ್ಗೆ ತನಿಖೆ ನಡೆಸಲಿದೆ ಎಂದು ವಿಶ್ವವಿದ್ಯಾಲಯದ ವಾಕ್ತಾರ ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಶಿಕ್ಷಕರ ಸಂಘದ ಪದಾಧಿಕಾರಿಗಳು ಬುಧವಾರ ಸಂಜೆ ಸಭೆ ಸೇರಿ ಪರಿಸ್ಥಿತಿಯ ಅವಲೋಕನ ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.