ನವದೆಹಲಿ: ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ವಿಡಿಯೊ ಕಾನ್ಫರೆನ್ಸ್ ಮೂಲಕ 400ಕ್ಕೂ ಅಧಿಕ ಪ್ರಕರಣಗಳ ವಿಚಾರಣೆ ನಡೆಸಿರುವುದಾಗಿ ಅಧಿಕೃತ ಮಾಹಿತಿಯಿಂದ ತಿಳಿದು ಬಂದಿದೆ.
ನ್ಯಾಯಮೂರ್ತಿ ಆದರ್ಶ್ ಕೆ ಗೋಯಲ್ ನೇತೃತ್ವದಲ್ಲಿ ಮೇ 5ರಿಂದ 409 ಪ್ರಕರಣಗಳ ವಿಚಾರಣೆ ನಡೆಸಲಾಗಿದೆ. ಮೇ 3ರಿಂದ ಜೂನ್ 30ರ ವರೆಗೂ 210 ಪ್ರಕರಣಗಳ ಇತ್ಯರ್ಥ್ಯ ಮಾಡಲಾಗಿದೆ ಎಂಬುದು ಎನ್‌ಜಿಟಿ ಮಾಹಿತಿಯಿಂದ ತಿಳಿದಿದೆ. ಇದೇ ಅವಧಿಯಲ್ಲಿ ನ್ಯಾಯಮಂಡಳಿಗೆ 267 ಹೊಸ ಪ್ರಕರಣಗಳ ಅರ್ಜಿಗಳು ಸಲ್ಲಿಕೆಯಾಗಿವೆ.
ಕೋವಿಡ್–19ನಿಂದ ಉಂಟಾಗುತ್ತಿರುವ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಎನ್‌ಜಿಟಿ ಹಲವು ನಿರ್ದೇಶನಗಳನ್ನು ಹೊರಡಿಸಿದೆ.
ಎಲ್‌ಜಿ ಪಾಲಿಮರ್ಸ್ ಕಾರ್ಖಾನೆಯಲ್ಲಿ ಅನಿಲ ಸೋರಿಕೆ, ಆಂಧ್ರ ಪ್ರದೇಶದ ಸ್ಪೈ ಆಗ್ರೊ ಇಂಡಸ್ಟ್ರೀಸ್ ಹಾಗೂ ಸೈನರ್ ಲೈಫ್ ಸೈನ್ಸಸ್ ಫ್ಯಾಕ್ಟರಿಗೆ ಸಂಬಂಧಿಸಿದ ಪ್ರಕರಣಗಳನ್ನು ಆದ್ಯತೆಯಾಗಿ ಪರಿಗಣಿಸಿ ವಿಚಾರಣೆ ನಡೆಸಲಾಗಿದೆ ಹಾಗೂ ಕಂಪನಿಗಳಿಗೆ ದಂಡ ವಿಧಿಸಲಾಗಿದೆ.
ಘನ ತ್ಯಾಜ್ಯ ನಿರ್ವಹಣೆ ಹಾಗೂ ಗಂಗಾ ಮತ್ತು ಯಮುನಾ ನದಿಯಂತಹ ಜಲ ಮೂಲಗಳ ಪುನಶ್ಚೇತನ ಕಾರ್ಯಗಳಿಗೆ ಸಂಬಂಧಿಸಿದಂತೆ ಎನ್‌ಜಿಟಿ ವಿಚಾರಣೆ ನಡೆಸುತ್ತದೆ. ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ಕಾರ್ಯನಿರ್ವಹಣೆಯ ದಿನಗಳು ಕಡಿಮೆಯಾದ ಕಾರಣ, ಅದನ್ನು ಸರಿದೂಗಿಸಲು 2020ರ ಬೇಸಿಗೆ ರಜಾ ದಿನಗಳನ್ನು ರದ್ದು ಪಡಿಸಿರುವುದಾಗಿ ಈ ಹಿಂದೆ ಪ್ರಕಟಿಸಿತ್ತು.
ಎನ್‌ಜಿಟಿ ಮುಖ್ಯಸ್ಥರು, ಸದಸ್ಯರು ಹಾಗೂ ಅಧಿಕಾರಿಗಳು (ರೆಜಿಸ್ಟ್ರಾರ್‌ಗಳು ಮತ್ತು ಮೇಲ್ಪಟ್ಟ ಅಧಿಕಾರಿಗಳು) ಕಚೇರಿಯಲ್ಲಿ ಶೇ 100 ಹಾಜರಾತಿ ಇರುವಂತೆ ಮೊದಲಿಗೆ ಸೂಚನೆ ನೀಡಿತ್ತು. ಅಧಿಕಾರಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಪಡುತ್ತಿದ್ದಂತೆ ಎನ್‌ಜಿಟಿ ಕಚೇರಿಗಳಲ್ಲಿ ಸೋಂಕು ನಿವಾರಕ ಸಿಂಪಡಿಸಿ ಸ್ವಚ್ಛತೆ ಕಾರ್ಯ ನಡೆಸಲಾಯಿತು. ಅದರೊಂದಿಗೆ ಎಲ್ಲ ಸಿಬ್ಬಂದಿ ಸರ್ಕಾರ ನಿಗದಿ ಪಡಿಸಿರುವ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಅನುಸರಿಸುವಂತೆ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.