ಜಮ್ಮು : ಬಿಗಿ ಭದ್ರತೆಯ ನಡುವೆ ಶುಕ್ರವಾರ 4,400 ಯಾತ್ರಾರ್ಥಿಗಳು ಜಮ್ಮುವಿನಿಂದ ದಕ್ಷಿಣ ಕಾಶ್ಮೀರದಲ್ಲಿರುವ ಅಮರನಾಥ ಯಾತ್ರೆಗೆ ತೆರಳಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಬಾಲ್‌ಟಾಲ್, ಪಹಲಗಾಮ್ ಶಿಬಿರಕ್ಕೆ ತಲುಪಿದ ಬಳಿಕ ಅಲ್ಲಿಂದ 3,880 ಮೀಟರ್ ಎತ್ತರದಲ್ಲಿರುವ ದೇವಾಲಯಕ್ಕೆ ತೆರಳಲಿದ್ದಾರೆ. ಗುರುವಾರದ ತನಕ 2,66,955 ಯಾತ್ರಾರ್ಥಿಗಳು ದೇವರ ದರ್ಶನ ಪಡೆದಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.
4,434 ಯಾತ್ರಾರ್ಥಿಗಳ 15ನೇ ತಂಡವನ್ನು 165 ವಾಹನಗಳಲ್ಲಿ ಬೆಳಿಗ್ಗೆ 3 ಗಂಟೆ ವೇಳೆಗೆ ಶಿಬಿರಕ್ಕೆ ಕರೆದೊಯ್ಯಲಾಯಿತು. ದಾರಿಯುದ್ದಕ್ಕೂ ಸಿಆರ್‌ಪಿಎಫ್ ಯೋಧರು ಬಿಗಿ ಭದ್ರತೆ ನೀಡಿದ್ದರು.
2,713 ಯಾತ್ರಾರ್ಥಿಗಳು 48 ಕಿ.ಮೀ ಉದ್ದದ ಪಹಲಗಾಮ್ ಮೂಲಕ ತೆರಳಿದರೆ, ಬಾಲ್‌ಟಾಲ್ ಮೂಲಕ 1,721 ಮಂದಿ ತೆರಳಿದರು ಎಂದರು.
52 ದಿನಗಳ ಯಾತ್ರೆಯು ಜೂನ್ 29ರಂದು ಆರಂಭಗೊಂಡಿದೆ. ಜಮ್ಮುವಿನಲ್ಲಿ ಸರಣಿ ಭಯೋತ್ಪಾದಕ ದಾಳಿಗಳು ನಡೆಯುತ್ತಿರುವ ಮಧ್ಯೆಯೇ ಕಠುವಾದಲ್ಲಿ ಸೋಮವಾರ ಉಗ್ರರ ದಾಳಿಗೆ ಐದು ಮಂದಿ ಯೋಧರು ಹುತಾತ್ಮರಾಗಿದ್ದರು. ಇದಾದ ಬಳಿಕ ಬೃಹತ್ ಪ್ರಮಾಣದ ಶೋಧ ಕಾರ್ಯ ಆರಂಭಗೊಂಡಿದೆ.
ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜಮ್ಮುವಿನಿಂದ ಕಾಶ್ಮೀರಕ್ಕೆ ಪ್ರಯಾಣ ಬೆಳೆಸುವ ಭಗವತಿ ನಗರ ಶಿಬಿರಕ್ಕೆ ನೀಡಲಾದ ಭದ್ರತೆಯನ್ನು ಸಾಕಷ್ಟು ಹೆಚ್ಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆ.19ಕ್ಕೆ ಯಾತ್ರೆ ಕೊನೆಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.