ADVERTISEMENT

ಶೇ 47ಕ್ಕೂ ಅಧಿಕ ಆ್ಯಂಟಿಬಯೊಟಿಕ್‌ಗಳಿಗೆ ಡಿಸಿಜಿಐ ಅನುಮೋದನೆ ಇರಲಿಲ್ಲ: ಅಧ್ಯಯನ

‘ಲ್ಯಾನ್ಸೆಟ್’ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಉಲ್ಲೇಖ

ಪಿಟಿಐ
Published 7 ಸೆಪ್ಟೆಂಬರ್ 2022, 10:46 IST
Last Updated 7 ಸೆಪ್ಟೆಂಬರ್ 2022, 10:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದ ಖಾಸಗಿ ವಲಯದಲ್ಲಿ 2019ರಲ್ಲಿ ಬಳಸಿದ ಆ್ಯಂಟಿಬಯೊಟಿಕ್‌ಗಳ (ಜೀವಪ್ರತಿರೋಧಕ ಔಷಧ) ಪೈಕಿ ಶೇ 47ಕ್ಕೂ ಹೆಚ್ಚಿನ ಪ್ರಮಾಣದ ಔಷಧಗಳಿಗೆ ಭಾರತೀಯ ಔಷಧ ಮಹಾನಿಯಂತ್ರಿಕರ (ಡಿಸಿಜಿಐ) ಅನುಮೋದನೆಯೇ ಇರಲಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ.

ಅಮೆರಿಕದ ಬಾಸ್ಟನ್ ವಿಶ್ವವಿದ್ಯಾಲಯ ಹಾಗೂ ನವದೆಹಲಿ ಮೂಲದ ‘ಪಬ್ಲಿಕ್ ಹೆಲ್ತ್ ಫೌಂಡೇಷನ್’ ಈ ವಿಷಯ ಕುರಿತು ಸಂಶೋಧನೆ ಕೈಗೊಂಡಿದ್ದವು. ಈ ಸಂಶೋಧನಾ ವರದಿ ‘ಲ್ಯಾನ್ಸೆಟ್‌’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

ಭಾರತದಲ್ಲಿ ಬಳಕೆಯಾಗುವ ಒಟ್ಟು ಆ್ಯಂಟಿಬಯೊಟಿಕ್‌ಗಳ ಪೈಕಿ ಶೇ 85–90ರಷ್ಟು ಪ್ರಮಾಣದ ಈ ಔಷಧ ಖಾಸಗಿ ವಲಯದಲ್ಲಿಯೇ ಬಳಕೆಯಾಗುತ್ತದೆ. ಅಂದಾಜು 5 ಸಾವಿರ ಔಷಧ ತಯಾರಕ ಕಂಪನಿಗಳು ಹಾಗೂ 9 ಸಾವಿರ ಸ್ಟಾಕಿಸ್ಟ್‌ಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ವಿವರಿಸಲಾಗಿದೆ.

ADVERTISEMENT

2019ರಲ್ಲಿ ‘ಅಜಿಥ್ರೋಮೈಸಿನ್‌ 500 ಎಂಜಿ’ ಮಾತ್ರೆ ಅತಿ ಹೆಚ್ಚಿನ ಪ್ರಮಾಣದಲ್ಲಿ (ಶೇ 7.6ರಷ್ಟು) ಬಳಕೆಯಾಗಿದೆ. ನಂತರದ ಸ್ಥಾನದಲ್ಲಿ ‘ಸೆಫಿಕ್ಸೈಮ್ 200 ಎಂಜಿ’ ಮಾತ್ರೆ (ಶೇ 6.5ರಷ್ಟು ಬಳಕೆ) ಇದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

‘ನಿಗಾ ವ್ಯವಸ್ಥೆ ಇಲ್ಲ’: ‘ನಮ್ಮ ದೇಶದಲ್ಲಿ ಆ್ಯಂಟಿಬಯೊಟಿಕ್‌ ಬಳಕೆ ಬಗ್ಗೆ ನಿಗಾ ವಹಿಸುವ ಸಮರ್ಪಕ ವ್ಯವಸ್ಥೆಯೇ ಇಲ್ಲ’ ಎಂದು ಹೈದರಾಬಾದ್‌ನ ಯಶೋದಾ ಆಸ್ಪತ್ರೆಯ ವೈದ್ಯ ಹಾಗೂ ಮಧುಮೇಹ ತಜ್ಞ ಡಾ.ಹರಿಕಿಶನ್ ಬೂರುಗು ಹೇಳುತ್ತಾರೆ.

‘ಆ್ಯಂಟಿಬಯೊಟಿಕ್‌ಗಳ ಬಳಕೆಗೆ ಸಂಬಂಧಿಸಿದ ಸಮಸ್ಯೆ ವಿವಿಧ ಹಂತಗಳಲ್ಲಿ ಕಾಣಬಹುದು. ಯಾವುದೇ ವೈದ್ಯರ ಸಲಹೆ ಇಲ್ಲದೆಯೇ ರೋಗಿಗಳು ಈ ಔಷಧಗಳನ್ನು ಬಳಸುವುದು, ನಕಲಿ ವೈದ್ಯರ ಸಲಹೆಯಂತೆ ಬಳಕೆ ಮಾಡುವುದು ಅಲ್ಲದೇ, ಅರ್ಹ ವೈದ್ಯರು ಸಹ ತಮಗೆ ತೋಚಿದಂತೆ ಆ್ಯಂಟಿಬಯೊಟಿಕ್‌ಗಳನ್ನು ರೋಗಿಗಳಿಗೆ ನೀಡುವುದನ್ನು ಕಾಣಬಹುದು’ ಎಂದೂ ಅವರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.