ADVERTISEMENT

ಪರಿಶಿಷ್ಟರ ಮೇಲಿನ ದೌರ್ಜನ್ಯ: ಎನ್‌ಸಿಎಸ್‌ಸಿಗೆ 47 ಸಾವಿರ ದೂರು

ನಾಲ್ಕು ವರ್ಷಗಳಲ್ಲಿ ಸಲ್ಲಿಕೆಯಾಗಿರುವ ದೂರುಗಳು * ಉತ್ತರಪ್ರದೇಶದಿಂದಲೇ ಅತಿ ಹೆಚ್ಚು

ಪಿಟಿಐ
Published 13 ಅಕ್ಟೋಬರ್ 2024, 13:30 IST
Last Updated 13 ಅಕ್ಟೋಬರ್ 2024, 13:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪರಿಶಿಷ್ಟ ಜಾತಿ ರಾಷ್ಟ್ರೀಯ ಆಯೋಗಕ್ಕೆ (ಎನ್‌ಸಿಎಸ್‌ಸಿ) ನಾಲ್ಕು ವರ್ಷಗಳಲ್ಲಿ 47,000ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾಗಿವೆ. ಈ ದೂರುಗಳು ಹೆಚ್ಚಾಗಿ ಪರಿಶಿಷ್ಟರ ಮೇಲಿನ ದೌರ್ಜನ್ಯ, ಭೂವಿವಾದ ಹಾಗೂ ಸರ್ಕಾರಿ ಉದ್ಯೋಗಗಳ ಸಮಸ್ಯೆಗಳಿಗೆ ಸಂಬಂಧಿಸಿದ್ದಾಗಿವೆ.

ಮಾಹಿತಿ ಹಕ್ಕು ಕಾಯ್ದೆಯಡಿ ಪಿಟಿಐ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯಿಸಿರುವ ಆಯೋಗವು, ಮಾಹಿತಿ ಹಂಚಿಕೊಂಡಿದೆ. 2020–21ರ ಸಾಲಿನಲ್ಲಿ 11,917 ದೂರು, 2021–22ರಲ್ಲಿ 13,964, 2022–23ರಲ್ಲಿ 12,402 ಮತ್ತು 2024ರಲ್ಲಿ ಈವರೆಗೆ 9,550 ದೂರುಗಳನ್ನು ಸ್ವೀಕರಿಸಲಾಗಿದೆ.

ಈ ಮಾಹಿತಿಯ ಬಗ್ಗೆ ಪ್ರತಿಕ್ರಿಯಿಸಿದ ಆಯೋಗದ ಮುಖ್ಯಸ್ಥ ಕಿಶೋರ್‌ ಮಖ್ವಾನ ಅವರು, ‘ದೂರುಗಳನ್ನು ತ್ವರಿತವಾಗಿ ಪರಿಹರಿಸುವುದಕ್ಕಾಗಿ ಮುಂದಿನ ತಿಂಗಳಿಂದ ನಾನು ಅಥವಾ ನನ್ನ ಸದಸ್ಯರು ರಾಜ್ಯ ಕಚೇರಿಗಳಿಗೆ ಭೇಟಿ ನೀಡಿ, ಪರಿಶೀಲಿಸುತ್ತೇವೆ’ ಎಂದು ತಿಳಿಸಿದರು. ಪ್ರತಿ ವಾರ ನಾಲ್ಕು ಬಾರಿ ಜನರ ಸಮಸ್ಯೆ ಆಲಿಸುತ್ತಿರುವುದಾಗಿಯೂ ಅವರು ಹೇಳಿದರು.

ADVERTISEMENT

ಉತ್ತರ ಪ್ರದೇಶದಿಂದ ದೇಶದಲ್ಲೇ ಹೆಚ್ಚು ದೂರುಗಳು ದಾಖಲಾಗಿವೆ. ಆಯೋಗವು ನಿತ್ಯ 200–300 ದೂರುಗಳನ್ನು ಸ್ವೀಕರಿಸುತ್ತಿದೆ ಎಂದು ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳ ಜನರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಇರುವ ಸಹಾಯವಾಣಿಯ ಅಂಕಿಅಂಶದ ಪ್ರಕಾರ 6,02,177 ಕರೆಗಳು ಸ್ವೀಕಾರವಾಗಿವೆ. ಒಟ್ಟು ದೂರುಗಳ ಸಂಖ್ಯೆ 5,843 ಆಗಿದ್ದು, 1,784 ದೂರುಗಳನ್ನು ಪರಿಹರಿಸಲಾಗಿದೆ. ದೇಶದಲ್ಲೇ ಅರ್ಧದಷ್ಟು ಕರೆಗಳು (3,10,623) ಉತ್ತರಪ್ರದೇಶದಿಂದ ಬಂದಿವೆ. ಈ ಸಹಾಯವಾಣಿಯು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಯಲ್ಲಿದೆ.

13 ರಾಜ್ಯಗಳಲ್ಲಿ ಹೆಚ್ಚು ಪ್ರಕರಣ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ನಿಯಂತ್ರಣ) ಕಾಯಿದೆ ಅಡಿ ಸರ್ಕಾರದ ಇತ್ತೀಚಿನ ಮಾಹಿತಿ ಪ್ರಕಾರ ಪರಿಶಿಷ್ಟ ಜಾತಿಯವರ ಮೇಲಿನ ದೌರ್ಜನ್ಯ ಪ್ರಕರಣಗಳು 13 ರಾಜ್ಯಗಳಲ್ಲಿ ಕೇಂದ್ರೀಕೃತವಾಗಿವೆ. 2022ರ ವರದಿಯಂತೆ ಈ ರಾಜ್ಯಗಳ ಪಾಲು ಶೇ 97.7. ಕಾಯ್ದೆಯಡಿ 2022ರಲ್ಲಿ 51656 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 12287 ಪ್ರಕರಣಗಳು ಅಂದರೆ ಶೇ 23.78ರಷ್ಟು ಉತ್ತರಪ್ರದೇಶದ್ದೇ ಆಗಿವೆ. ನಂತರದ ಸ್ಥಾನದಲ್ಲಿ ರಾಜಸ್ಥಾನವಿದ್ದು ಅಲ್ಲಿ 8651 ಪ್ರಕರಣಗಳು (ಶೇ 16.75) ಮತ್ತು ಮಧ್ಯಪ್ರದೇಶದಿಂದ 7732 (ಶೇ 14.97) ಪ್ರಕರಣಗಳು ದಾಖಲಾಗಿವೆ. ಬಿಹಾರ 6799 (ಶೇ 13.16) ಒಡಿಶಾ 3576 (ಶೇ 6.93) ಮತ್ತು ಮಹಾರಾಷ್ಟ್ರದಿಂದ 2706 (ಶೇ 5.24) ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳಲ್ಲಿ ಈ ಆರು ರಾಜ್ಯಗಳ ಪಾಲು ಶೇ 81 ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.