ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ‘ಹರ್ ಘರ್ ತಿರಂಗಾ’ ಅಭಿಯಾನದ ವೆಬ್‌ಸೈಟ್‌ನಲ್ಲಿ ಈವರೆಗೆ 5 ಕೋಟಿಗೂ ಹೆಚ್ಚು ಮಂದಿ ರಾಷ್ಟ್ರ ಧ್ವಜದ ಜತೆ ಸೆಲ್ಫಿ ತೆಗೆದು ಅಪ್ಲೋಡ್ ಮಾಡಿದ್ದಾರೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ.
ಇದೊಂದು ಅದ್ಭುತ ಸಾಧನೆ ಎಂದು ಸಚಿವಾಲಯ ಬಣ್ಣಿಸಿದೆ.
76ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪುಕೋಟೆಯಲ್ಲಿ ವೈಭವೋಪೇತವಾದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ 25 ವರ್ಷಗಳ ‘ಅಮೃತ ಕಾಲ’ದ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಮೋದಿ ಅವರು ಜುಲೈ 22ರಂದು ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಕರೆ ನೀಡಿದ್ದರು. ಮನೆಯಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡುವಂತೆ ಮನವಿ ಮಾಡಿದ್ದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಪ್ರಧಾನ ಸೂತ್ರಧಾರಿಯಾಗಿರುವ ಸಂಸ್ಕೃತಿ ಸಚಿವಾಲಯ ಸಹ ‘ತಿರಂಗಾ’ ಜತೆ ಸೆಲ್ಫಿ ತೆಗೆದು ಅಭಿಯಾನಕ್ಕೆ ಸಂಬಂಧಿಸಿದ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡುವಂತೆ ಜನತೆಗೆ ಮನವಿ ಮಾಡಿತ್ತು.
ಐದು ಕೋಟಿ ‘ತಿರಂಗಾ’ ಸೆಲ್ಫಿಗಳು ದೇಶ ಮೊದಲು ಎಂಬ ಭಾರತೀಯ ನಾಗರಿಕರ ಬದ್ಧತೆಯ ಸಂಕೇತವಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.