ADVERTISEMENT

ರಾಂಬನ್‌ನಲ್ಲಿ ಭೂ ಕುಸಿತ: ಹಲವು ಮನೆಗಳಿಗೆ ಹಾನಿ, 500ಕ್ಕೂ ಹೆಚ್ಚು ಜನರ ಸ್ಥಳಾಂತರ

ಪಿಟಿಐ
Published 28 ಏಪ್ರಿಲ್ 2024, 2:38 IST
Last Updated 28 ಏಪ್ರಿಲ್ 2024, 2:38 IST
<div class="paragraphs"><p>ರಾಂಬನ್‌ನಲ್ಲಿ ಭೂ ಕುಸಿತ: ಹಲವು ಮನೆಗಳಿಗೆ ಹಾನಿ</p></div>

ರಾಂಬನ್‌ನಲ್ಲಿ ಭೂ ಕುಸಿತ: ಹಲವು ಮನೆಗಳಿಗೆ ಹಾನಿ

   

(ಚಿತ್ರ ಕೃಪೆ–ಎಎನ್‌ಐ)

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಭೂ ಕುಸಿತ ಸಂಭವಿಸಿದೆ. ಘಟನೆಯಲ್ಲಿ 58ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, 500ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ADVERTISEMENT

ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮಾನದಂಡಗಳ ಅಡಿಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ಶೀಘ್ರವಾಗಿ ಪರಿಹಾರ ಬಿಡುಗಡೆ ಮಾಡಲು ಪರಿಶೀಲನೆ ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ .

ಗುರುವಾರ ಸಂಜೆ ಗ್ರಾಮದಲ್ಲಿ ಭೂ ಕುಸಿತ ಸಂಭವಿಸಿದೆ. ನಾಲ್ಕು ಪ್ರಸರಣ ಟವರ್‌ಗಳು, ವಿದ್ಯುತ್ ಕೇಂದ್ರ ಮತ್ತು ಗೂಲ್ ಉಪವಿಭಾಗವನ್ನು ರಾಂಬನ್ ಜಿಲ್ಲಾ ಕೇಂದ್ರದೊಂದಿಗೆ ಸಂಪರ್ಕಿಸುವ ರಸ್ತೆಯ ಒಂದು ಭಾಗಕ್ಕೆ ಹೆಚ್ಚು ಹಾನಿಯಾಗಿದೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ) ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಬಸೀರ್-ಉಲ್-ಹಕ್ ಚೌಧರಿ ಅವರ ನೇತೃತ್ವದಲ್ಲಿ ರಾಂಬನ್ ಜಿಲ್ಲಾಡಳಿತ ಎಲ್ಲಾ ಸಂತ್ರಸ್ತ ಕುಟುಂಬಗಳನ್ನು ಸ್ಥಳಾಂತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂ ಕುಸಿತದಿಂದಾಗಿ 58 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಒಟ್ಟು 100 ಕುಟುಂಬಗಳ ಮೇಲೆ ಪರಿಣಾಮ ಬೀರಿದೆ. ಈವರೆಗೆ 500 ಜನರನ್ನು ಸ್ಥಳಾಂತರಿಸಲಾಗಿದೆ ಮತ್ತು ಅವರಿಗೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹವಾಮಾನ ವೈಪರೀತ್ಯದ ನಡುವೆಯೂ ಜಿಲ್ಲಾಡಳಿತ ತೆರವು ಕಾರ್ಯ ಕೈಗೊಂಡಿದೆ. ಹೆಚ್ಚಿನ ಸಂತ್ರಸ್ತ ಕುಟುಂಬಗಳನ್ನು ಮೈತ್ರಾ ಸಮುದಾಯ ಭವನಕ್ಕೆ ಸ್ಥಳಾಂತರಿಸಲಾಗಿದೆ. ಹೆಚ್ಚುವರಿಯಾಗಿ, ರಾಂಬನ್ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ ಯಾಸಿರ್ ವಾನಿ ಅವರ ಮೇಲ್ವಿಚಾರಣೆಯಲ್ಲಿ 24x7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಜೊತೆಗೆ ಸಂಕಷ್ಟದಲ್ಲಿ ಸಿಲುಕಿರುವವರ ರಕ್ಷಣೆಗಾಗಿ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಗಳು, ಪೊಲೀಸ್, ನಾಗರಿಕ ಸ್ವಯಂಸೇವಕರನ್ನು ಸಜ್ಜುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.