ನವದೆಹಲಿ: ಭಾರತದ ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಸೇರಿದ 50ಕ್ಕೂ ಹೆಚ್ಚು ವಿಮಾನಗಳಿಗೆ ಇಂದು (ಸೋಮವಾರ) ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ.
‘ಈ ಮೂಲಕ 15 ದಿನಗಳಲ್ಲಿ ಒಟ್ಟಾರೆ 410ಕ್ಕೂ ಹೆಚ್ಚು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಬಂದಂತಾಗಿವೆ. ಹೆಚ್ಚಿನ ಬೆದರಿಕೆ ಸಂದೇಶಗಳು ಸಾಮಾಜಿಕ ಮಾಧ್ಯಮಗಳ ಮೂಲಕವೇ ಬಂದಿವೆ. ಏರ್ ಇಂಡಿಯಾ ಮತ್ತು ಇಂಡಿಗೊದ ತಲಾ ಸುಮಾರು 21 ವಿಮಾನಗಳು ಮತ್ತು ವಿಸ್ತಾರಾದ 20 ವಿಮಾನಗಳಿಗೆ ಸೋಮವಾರವೂ ಬೆದರಿಕೆಗಳು ಬಂದಿವೆ’ ಎಂದು ಮೂಲಗಳು ಮಾಹಿತಿ ನೀಡಿವೆ.
‘ಬೆದರಿಕೆ ಸಂದೇಶ ಬಂದ ಕೂಡಲೇ ನಿಯಮಗಳ ಅನ್ವಯ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣವೇ ಮಾಹಿತಿ ನೀಡಲಾಯಿತು. ಜತೆಗೆ, ಅಧಿಕಾರಿಗಳ ಸೂಚನೆಯಂತೆ ಎಲ್ಲಾ ಭದ್ರತಾ ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು’ ಎಂದು ಇಂಡಿಗೊದ ವಕ್ತಾರರು ತಿಳಿಸಿದ್ದಾರೆ.
ಬಾಂಬ್ ಬೆದರಿಕೆಯಂತಹ ಸಂದೇಶಗಳ ಪ್ರವೇಶವನ್ನು ನಿರ್ಬಂಧಿಸುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸೂಚಿಸಿರುವ ಕೇಂದ್ರ ಸರ್ಕಾರ, ತಪ್ಪಿದಲ್ಲಿ ಅನ್ಯವ್ಯಕ್ತಿಗಳು ಕಳುಹಿಸುವ ಸಂದೇಶಗಳಿಗೆ ಇದ್ದ ಕಾನೂನು ರಕ್ಷಣೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಕೆಲ ದಿನಗಳಿಂದ ಭಾರತೀಯ ವಿಮಾನಯಾನ ಸಂಸ್ಥೆಗಳ ಹಲವು ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕುರಿತು ಎಚ್ಚರಿಕೆ ರವಾನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.