ಗಂಜಾಂ (ಒಡಿಶಾ): ಇಲ್ಲಿನ ರುಶಿಕುಲ್ಯ ಕಡಲ ತೀರವು ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲೆ ಜಾತಿಗೆ ಸೇರಿದ ಆಮೆಗೆ ಸಂತಾನೋತ್ಪತ್ತಿಯ ಪ್ರಮುಖ ತಾಣವಾಗಿದ್ದು, ತೀರದುದ್ದಕ್ಕೂ ಆಮೆಗಳು ದಾಖಲೆಯ ಸಂಖ್ಯೆಯಲ್ಲಿ 6.37 ಲಕ್ಷಕ್ಕೂ ಅಧಿಕ ಮೊಟ್ಟೆಗಳನ್ನಿಟ್ಟಿವೆ ಎಂದು ಮೂಲಗಳು ತಿಳಿಸಿವೆ.
ಫೆ.23ರಿಂದಲೇ ರುಶಿಕುಲ್ಯ ತೀರದಲ್ಲಿ 3 ಕಿ.ಮೀ. ದೂರದ ತನಕ ಗೂಡು ಕಟ್ಟಲು ಆಮೆಗಳು ಶುರುಮಾಡಿದ್ದವು. ಈ ಅವಧಿಯಲ್ಲಿ 6,37,008 ಆಮೆಗಳು ಮೊಟ್ಟೆ ಇಟ್ಟಿವೆ. ಮೊಟ್ಟೆಗಳ ಸಂಖ್ಯೆ ಹಿಂದಿನ ವರ್ಷಕ್ಕಿಂತ 86,000 ದಷ್ಟು ಹೆಚ್ಚಾಗಿದೆ ಎಂದು ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಸನ್ನಿ ಖೋಕ್ಕರ್ ಹೇಳಿದರು.
‘ರುಶಿಕುಲ್ಯದ ಕಡಲಿಗೆ ಸೇರುವ ನದಿ ಮುಖ ಪ್ರದೇಶದಲ್ಲಿ ಆಮೆಗಳು ನೆಲೆಸಿವೆ. ಅವು ಇಡುವ ಮೊಟ್ಟೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕಗೊಳ್ಳುತ್ತಿವೆ.
ಈ ಬಾರಿ ಸಾಮೂಹಿಕ ಗೂಡುಕಟ್ಟುವಿಕೆ ಬೇಗನೆ ನಡೆದಿರುವುದರಿಂದ, ಬೇಗನೆ ಮೊಟ್ಟೆಯೊಡೆದು ಮರಿಗಳು ಹೊರಬರುವುದನ್ನು ನಿರೀಕ್ಷಿಸುತ್ತಿದ್ದೇವೆ‘ ಎಂದು ಖೋಕ್ಕರ್ ತಿಳಿಸಿದರು.
‘ಗೂಡು ಕಟ್ಟಿದ ಸುಮಾರು 45ರಿಂದ 50 ದಿನಗಳ ನಂತರ ಮರಳಿನ ಹೊಂಡದಿಂದ ಹೊರಬರುವ ಮರಿಗಳನ್ನು ನೋಡಲು ತಾಯಿ ಆಮೆಗಳು ಕಾಯದ ಕಾರಣ, ತಾಯಿಯ ಅನುಪಸ್ಥಿತಿಯಲ್ಲಿ ಮರಿಗಳನ್ನು ಆರೈಕೆ ಮಾಡಲಾಗುತ್ತದೆ. ಮೊಟ್ಟೆಗಳನ್ನು ಇತರ ಜೀವಿಗಳು ತಿನ್ನದಂತೆ ಕಾಪಾಡಲು ಸುತ್ತಲೂ ಬೇಲಿ ಹಾಕಲಾಗಿದೆ. ಮೊಟ್ಟೆಯಿಂದ ಮರಿ ಹೊರ ಬರುವ ಸಂದರ್ಭ ಪಕ್ಷಿಗಳಿಂದ ರಕ್ಷಿಸಲು ಇಡೀ ಪ್ರದೇಶವನ್ನು ಸೊಳ್ಳೆ ಪರದೆಯಿಂದ ಮುಚ್ಚಲಾಗುತ್ತದೆ‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.