ನವದೆಹಲಿ:‘ದೇಶದಾದ್ಯಂತ ಕನಿಷ್ಠ 695 ವಿಶ್ವವಿದ್ಯಾಲಯಗಳು ಮತ್ತು 34,000ಕ್ಕೂ ಹೆಚ್ಚು ಕಾಲೇಜುಗಳು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯ (ನ್ಯಾಕ್) ಮಾನ್ಯತೆ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ’ ಎಂದು ಸೋಮವಾರ ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವ ಸುಭಾಷ್ ಸರ್ಕಾರ್ ಸೋಮವಾರ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತರೂಪದಲ್ಲಿ ಉತ್ತರಿಸಿದ ಸಚಿವರು, ‘ಯುಜಿಸಿಯಿಂದ ಪಡೆದ ಮಾಹಿತಿ ಪ್ರಕಾರ, 1,113 ವಿಶ್ವವಿದ್ಯಾಲಯಗಳಲ್ಲಿ 418 ವಿಶ್ವವಿದ್ಯಾಲಯಗಳು ಹಾಗೂ 43,796 ಕಾಲೇಜುಗಳಲ್ಲಿ 9,062 ಕಾಲೇಜುಗಳು ಮಾತ್ರ ನ್ಯಾಕ್ ಮಾನ್ಯತೆ ಪಡೆದಿವೆ. ದೇಶದಲ್ಲಿ 34,734 ಕಾಲೇಜುಗಳು ನ್ಯಾಕ್ ಮಾನ್ಯತೆ ಇಲ್ಲದೇ ಕಾರ್ಯ ನಿರ್ವಹಿಸುತ್ತಿವೆ’ ಎಂದು ತಿಳಿಸಿದ್ದಾರೆ.
‘ಎಲ್ಲ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳನ್ನು ಮಾನ್ಯತೆಯ ವ್ಯವಸ್ಥೆಯಡಿ ತರಲು, ನ್ಯಾಕ್ ಮೌಲ್ಯಮಾಪನ ಮತ್ತು ಮಾನ್ಯತೆಯ ಶುಲ್ಕ ರಚನೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಅಂಗಸಂಸ್ಥೆ ಮತ್ತು ಘಟಕ ಕಾಲೇಜುಗಳಿಗೆ ಸ್ವಯಂ ಅಧ್ಯಯನ ವರದಿಯ ಕೈಪಿಡಿಯಲ್ಲಿನ ಮೆಟ್ರಿಕ್ಸ್ ಮತ್ತು ಪ್ರಶ್ನೆಗಳನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ’ ಎಂದೂ ಸರ್ಕಾರ್ ಹೇಳಿದ್ದಾರೆ.
14,600ಕ್ಕೂ ಹೆಚ್ಚು ಬೋಧಕ ಹುದ್ದೆಗಳು ಖಾಲಿ
ನವದೆಹಲಿ:ಶಿಕ್ಷಣ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿರುವ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 14,600ಕ್ಕೂ ಹೆಚ್ಚಿನ ಬೋಧಕ ಹುದ್ದೆಗಳು ಖಾಲಿ ಇವೆ ಎಂದು ಸೋಮವಾರ ಲೋಕಸಭೆಗೆ ಮಾಹಿತಿ ನೀಡಲಾಗಿದೆ.
ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವ ಸುಭಾಷ್ ಸರ್ಕಾರ್ ಅವರು ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ಖಾಲಿ ಇರುವ ಹುದ್ದೆಗಳನ್ನು ತ್ವರಿತ ಗತಿಯಲ್ಲಿ ಭರ್ತಿ ಮಾಡಬೇಕು ಎಂದು ‘ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಚಿವಾಲಯವು ನಿರ್ದೇಶನ ನೀಡಿದೆ. ಈಗಾಗಲೇ 6 ಸಾವಿರಕ್ಕೂ ಹೆಚ್ಚಿನ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದೆ’ ಎಂದು ಹೇಳಿದ್ದಾರೆ.
‘ನಿವೃತ್ತಿ, ರಾಜೀನಾಮೆಯಿಂದಾಗಿ ಬೋಧಕರ ಹುದ್ದೆಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಬೋಧಕರ ಕೊರತೆಯು ವಿದ್ಯಾರ್ಥಿಗಳ ಅಧ್ಯಯನ ಮೇಲೆ ಪರಿಣಾಮ ಬೀರದಂತೆ ಸಂಸ್ಥೆಗಳು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ’ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.