ನವದೆಹಲಿ: ಕಳೆದ ಸುಮಾರು 4 ವರ್ಷಗಳಿಂದ ಆರ್ಥಿಕ ಅಪರಾಧಿಗಳು ಮತ್ತು ವಿದೇಶಗಳಲ್ಲಿ ತಲೆಮರೆಸಿಕೊಂಡಿರುವವರ ಬಳಿಯಿಂದ 1.8 ಶತಕೋಟಿ ಡಾಲರ್‌ಗೂ ಅಧಿಕ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಕೇಂದ್ರೀಯ ತನಿಖಾ ದಳದ(ಸಿಬಿಐ) ಕೇಂದ್ರ ಕಚೇರಿಯಲ್ಲಿ ಕಾರ್ಯಕ್ರಮ ಉದ್ದೇಶಿಸಿರುವ ಮಾತನಾಡಿರುವ ಅವರು, ಇತ್ತೀಚಿನ ದಿನಗಳಲ್ಲಿ ವಿದೇಶಗಳಿಂದ ಕ್ರಿಮಿನಲ್ಸ್ ಮತ್ತು ದೇಶ ಭ್ರಷ್ಟರ ಹಸ್ತಾಂತರ ಪ್ರಕ್ರಿಯೆ ಹೆಚ್ಚಾಗಿದೆ. ವಿಶೇಷವಾಗಿ ಅಕ್ಟೋಬರ್ 2022ರಲ್ಲಿ ಭಾರತವು ಇಂಟರ್‌ಪೋಲ್ ಸಾಮಾನ್ಯ ಸಭೆ ಆಯೋಜಿಸಿದ ಬಳಿಕ ಈ ಸಂಖ್ಯೆ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.
ಈ ವರ್ಷ ವಿದೇಶಗಳಿಂದ ಈವರೆಗೆ 19 ಮಂದಿ ದೇಶಭ್ರಷ್ಟರನ್ನು ಕರೆತರಲಾಗಿದೆ. 2022ರಲ್ಲಿ 27 ಮತ್ತು 2021ರಲ್ಲಿ 18 ಮಂದಿ ಹಿಂದಿರುಗಿದ್ದರು. ಈ ಹಿಂದಿನ ವರ್ಷಗಳಲ್ಲಿ ಸರಾಸರಿ ವರ್ಷಕ್ಕೆ 10 ಜನರನ್ನು ಕರೆತರಲಾಗಿದೆ ಎಂದು ಅವರು ಹೇಳಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ಅಪರಾಧಿಗಳ ಕಾಯ್ದೆಯನ್ನು ತಂದ ನಂತರ ಕಳೆದ ನಾಲ್ಕು ವರ್ಷಗಳಲ್ಲಿ 1.8 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಆರ್ಥಿಕ ಅಪರಾಧಿಗಳು ಮತ್ತು ದೇಶಭ್ರಷ್ಟರಿಂದ ವಸೂಲಿ ಮಾಡಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯು(ಪಿಎಂಎಲ್‌ಎ) ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಹಾಯ ಮಾಡಿದೆ. 2014ರಿಂದ 12 ಶತಕೋಟಿ ಡಾಲರ್‌ಗೂ ಹೆಚ್ಚು ಮೌಲ್ಯದ ಅಪರಾಧಿಗಳ ಆಸ್ತಿ ವಶಕ್ಕೆ ಪಡೆಯಲಾಗಿದೆ’ಎಂದು ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.