ಲಖನೌ: ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯ ಫೂಲರಾಯ್ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸತ್ಸಂಗ’ದ ವೇಳೆ ಸಂಭವಿಸಿದ ಕಾಲ್ತುಳಿತದಿಂದಾಗಿ ಕನಿಷ್ಠ 116 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.
ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್, ಕಾಲ್ತುಳಿತ ಸಂಭವಿಸಿದ್ದಕ್ಕೆ ಜನದಟ್ಟಣೆಯೂ ಪ್ರಮುಖ ಕಾರಣ ಎಂದು ಹೇಳಿದ್ದಾರೆ.
‘ಸತ್ಸಂಗ’ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸರ್ಕಾರ್ ವಿಶ್ವಹರಿ ಭೋಲೆಬಾಬಾ ಅವರ ಬೆಂಗಾವಲು ವಾಹನಗಳ ಸಂಚಾರಕ್ಕಾಗಿ ಒಂದು ದ್ವಾರವನ್ನು ಆಯೋಜಕರು ಮುಚ್ಚಿದ್ದರಿಂದ ಮತ್ತೊಂದು ದ್ವಾರದ ಮೇಲೆ ಒತ್ತಡ ಹೆಚ್ಚಾಯಿತು. ಜತೆಗೆ, ಭೋಲೆಬಾಬಾ ಅವರಿದ್ದ ವಾಹನದ ಹಿಂದೆ ಭಕ್ತರು ಓಡುತ್ತಿದ್ದರು. ಕೆಲವರು ಸ್ಥಳದಿಂದ ಮಣ್ಣು ಸಂಗ್ರಹಿಸಲು ಮುಗಿಬಿದ್ದಿದ್ದು ಕೂಡ ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಸಿಂಗ್ ಹೇಳಿದ್ದಾರೆ.
‘ಈ ಘಟನೆಯು ಅತ್ಯಂತ ದುಃಖಕರ ಮತ್ತು ಹೃದಯ ವಿದ್ರಾವಕವಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರತಿಯೊಂದು ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ. ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ’ ಎಂದು ಸಿಂಗ್ ತಿಳಿಸಿದ್ದಾರೆ.
‘ಸತ್ಸಂಗ’ ನಡೆಸಲು ಅನುಮತಿ ಕೋರಿ ಕಾರ್ಯಕ್ರಮದ ಆಯೋಜಕರು ಸಲ್ಲಿಸಿದ ಅರ್ಜಿಯಲ್ಲಿ 80 ಸಾವಿರ ಭಕ್ತರು ಭಾಗವಹಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದಾರೆ. ಇದು ಆಯೋಜಕರ ಕಡೆಯಿಂದ ಆಗಿರುವ ಲೋಪ ಎಂದು ಸಿಂಗ್ ವಿವರಿಸಿದ್ದಾರೆ.
ಮೃತಪಟ್ಟವರಲ್ಲಿ 108 ಮಹಿಳೆಯರು, 7 ಮಕ್ಕಳು ಮತ್ತು ಒಬ್ಬ ಪುರುಷ ಸೇರಿದ್ದಾರೆ. ಈ ಪೈಕಿ 72 ಮೃತರ ಗುರುತು ಪತ್ತೆಯಾಗಿದ್ದು, ಮೃತದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.