ADVERTISEMENT

ಕರ್ನಾಟಕವೂ ಸೇರಿದಂತೆ ಭಾರತದ 12 ಯುವಕರನ್ನು ಯುದ್ಧಕ್ಕೆ ಕಳುಹಿಸಿದ ರಷ್ಯಾ: ಓವೈಸಿ

ಪಿಟಿಐ
Published 21 ಫೆಬ್ರುವರಿ 2024, 16:29 IST
Last Updated 21 ಫೆಬ್ರುವರಿ 2024, 16:29 IST
<div class="paragraphs"><p>ಅಸಾದುದ್ದೀನ್‌ ಓವೈಸಿ</p></div>

ಅಸಾದುದ್ದೀನ್‌ ಓವೈಸಿ

   

ಹೈದರಾಬಾದ್: ‘ಉದ್ಯೋಗ ಭರವಸೆಯೊಂದಿಗೆ ಏಜೆಂಟರ ವಂಚನೆಗೆ ಒಳಗಾಗಿ ರಷ್ಯಾಗೆ ತೆರಳಿದ್ದ 12 ಭಾರತೀಯ ಯುವಕರನ್ನು ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಕಳುಹಿಸಲಾಗಿದ್ದು, ಇವರನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಕರೆತರಬೇಕು’ ಎಂದು ಕೇಂದ್ರ ಸರ್ಕಾರವನ್ನು ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಬುದ್ಧವಾರ ಒತ್ತಾಯಿಸಿದ್ದಾರೆ.

‘ರಷ್ಯಾದಲ್ಲಿ ಸಿಲುಕಿದವರಲ್ಲಿ ಕರ್ನಾಟಕ, ತೆಲಂಗಾಣ, ಗುಜರಾತ್, ಜಮ್ಮು ಮತ್ತು ಕಾಶ್ಮೀರ ಹಾಗೂ ಉತ್ತರ ಪ್ರದೇಶದ ಯುವಕರು ಸೇರಿದ್ದಾರೆ. ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ರಷ್ಯಾದೊಂದಿಗೆ ಮಾತುಕತೆ ನಡೆಸಿ, ಯುವಕರನ್ನು ಭಾರತಕ್ಕೆ ಕರೆತರಲು ಪ್ರಯತ್ನಿಸಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ಈ ಯುವಕರು ಕಳೆದ ಡಿಸೆಂಬರ್‌ನಲ್ಲಿ ರಷ್ಯಾಗೆ ತೆರಳಿದ್ದರು. ಇವರಿಗೆ ಕಟ್ಟಡದಲ್ಲಿ ಭದ್ರತಾ ಸಿಬ್ಬಂದಿ ಕೆಲಸ ನೀಡುವುದಾಗಿ ಹೇಳಲಾಗಿತ್ತು ಎಂದು ಏಜೆಂಟರು ಹೇಳಿದ್ದಾರೆ. ಈ ಕುರಿತಂತೆ ವಿದೇಶಾಂಗ ಸಚಿವರಿಗೆ ಹಾಗೂ ರಷ್ಯಾದಲ್ಲಿರುವ ಭಾರತೀಯ ರಾಯಭಾರಿಗೆ ಪತ್ರ ಬರೆಯಲಾಗಿದೆ’ ಎಂದಿದ್ದಾರೆ.

‘ಈ ಯುವಕರನ್ನು ರಷ್ಯಾಗೆ ಕಳುಹಿಸಿದ ಮೂವರ ಏಜೆಂಟರಲ್ಲಿ ಒಬ್ಬ ದುಬೈನಲ್ಲಿ ಇನ್ನಿಬ್ಬರು ಮುಂಬೈನಲ್ಲಿದ್ದಾರೆ. ಉದ್ಯೋಗದ ಆಮಿಷವೊಡ್ಡುವ ಏಜೆಂಟರು ಮುಗ್ದ ಯುವಕರನ್ನು ರಷ್ಯಾಗೆ ಕಳುಹಿಸಿ ಅಲ್ಲಿ ಸೇನೆಗೆ ಸೇರುವಂತೆ ಮಾಡುತ್ತಿದ್ದಾರೆ. ಇಂಥ ದೊಡ್ಡ ಜಾಲವೇ ಇದ್ದು, ಸರ್ಕಾರ ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಓವೈಸಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.