ADVERTISEMENT

ರಾಜ್ಯಕ್ಕೆ 361 ಟನ್: ರೈಲ್ವೆಯಿಂದ ಹತ್ತು ಸಾವಿರ ಟನ್‌ ದ್ರವೀಕೃತ ಆಮ್ಲಜನಕ ಸಾಗಣೆ

ಪಿಟಿಐ
Published 17 ಮೇ 2021, 16:38 IST
Last Updated 17 ಮೇ 2021, 16:38 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಭಾರತೀಯ ರೈಲ್ವೆಯು ಒಟ್ಟು ಹತ್ತು ಸಾವಿರ ಟನ್‌ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು (ಎಲ್‌ಎಂಒ) ವಿವಿಧ ರಾಜ್ಯಗಳಿಗೆ ತಲುಪಿಸುವ ಮೂಲಕ ಮೈಲಿಗಲ್ಲು ಸಾಧಿಸಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಸುನೀತ್ ಶರ್ಮಾ ಹೇಳಿದರು.

ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ತೀವ್ರಗೊಂಡ ನಂತರ ಏ.19ರಿಂದ ಈವರೆಗೆ 13 ರಾಜ್ಯಗಳಿಗೆ 600ಕ್ಕೂ ಹೆಚ್ಚು ಟ್ಯಾಂಕರ್‌ಗಳಲ್ಲಿ 10,300 ಟನ್‌ ದ್ರವೀಕೃತ ವೈದ್ಯಕೀಯ ಆಮ್ಲಜನಕ ತಲುಪಿಸಲಾಗಿದೆ ಎಂದರು.

ಕಳೆದ ಕೆಲವು ದಿನಗಳಿಂದ 'ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲುಗಳು ಪ್ರತಿದಿನ ಸುಮಾರು 800 ಟನ್ ವೈದ್ಯಕೀಯ ಆಮ್ಲಜನಕ ಸಾಗಿಸುತ್ತಿವೆ ಎಂದು ಮಾಹಿತಿ ನೀಡಿದರು.

ADVERTISEMENT

ಕರ್ನಾಟಕಕ್ಕೆ 361, ದೆಹಲಿಗೆ 3,734, ಉತ್ತರ ‍ಪ್ರದೇಶಕ್ಕೆ 2,652, ಮಹಾರಾಷ್ಟ್ರಕ್ಕೆ 521 ಟನ್‌, ಮಧ್ಯಪ್ರದೇಶಕ್ಕೆ 431, ಹರಿಯಾಣಕ್ಕೆ 1,290, ತೆಲಂಗಣಕ್ಕೆ 564, ರಾಜಸ್ಥಾನಕ್ಕೆ 40 ಟನ್‌ ಆಮ್ಲಜನಕ ತಲುಪಿಸಲಾಗಿದೆ ಎಂದೂ ತಿಳಿಸಿದ್ದಾರೆ.

4.32 ಲಕ್ಷ ರೈಲ್ವೆ ಸಿಬ್ಬಂದಿಗೆ ಲಸಿಕೆ

ಈವರೆಗೆ 4.32 ಲಕ್ಷ ರೈಲ್ವೆ ಸಿಬ್ಬಂದಿಗೆ ಲಸಿಕೆ ಹಾಕಲಾಗಿದ್ದು, ಬಾಕಿ ಸಿಬ್ಬಂದಿಗೆ ತ್ವರಿತವಾಗಿ ಲಸಿಕೆ ಒದಗಿಸುವ ಸಲುವಾಗಿ ನಾವು ರಾಜ್ಯ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಸುನೀತ್ ಶರ್ಮಾ ತಿಳಿಸಿದ್ದಾರೆ.

45 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಮತ್ತು ಆರೋಗ್ಯ ಕಾರ್ಯಕರ್ತರಾದ ವೈದ್ಯಕೀಯ, ರೈಲ್ವೆ ರಕ್ಷಣಾ ದಳ (ಆರ್‌ಪಿಎಫ್‌) ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗಿದೆ. ಲಸಿಕೆ ಪಡೆಯದೆ ಉಳಿದಿರುವ 45 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಸಿಬ್ಬಂದಿ ಸೇರಿದಂತೆ 18–45 ವರ್ಷದೊಳಗಿನ ಸಿಬ್ಬಂದಿಗೆ ತ್ವರಿತವಾಗಿ ಲಸಿಕೆ ನೀಡುವಂತೆ ರಾಜ್ಯ ಸರ್ಕಾರವನ್ನು ಕೋರಿದ್ದೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.