ರಾಷ್ಟ್ರದ ಮೂಲೆ ಮೂಲೆಗೆ ಆಮ್ಲಜನಕದ ಸಿಲಿಂಡರ್‌ಗಳನ್ನು ತಲುಪಿಸುವ ಮೂಲಕ ಆಕ್ಸಿಜನ್ ಎಕ್ಸ್‌ಪ್ರೆಸ್, ಆಕ್ಸಿಜನ್ ರೈಲ್‌ಗಳು ಆಮ್ಲಜನಕ ಕೊರತೆ ಸಂಕಷ್ಟದ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ಸಹಕರಿಸಿದವು ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಭಾನುವಾರ ರಾಷ್ಟ್ರವನ್ನು ಉದ್ದೇಶಿಸಿ 'ಮನ್ ಕಿ ಬಾತ್'ನಲ್ಲಿ ಮಾತನಾಡಿದ ಪಿಎಂ ನರೇಂದ್ರ ಮೋದಿ, ರಾಷ್ಟ್ರದೆಲ್ಲೆಡೆ ಆಮ್ಲಜನಕ ಕೊರತೆ ಎದುರಾದಾಗ ರಸ್ತೆ ಮೂಲಕ ಸಾಗುವ ಆಕ್ಸಿಜನ್ ಟ್ಯಾಂಕರ್‌ಗಳಿಂತ ಅಧಿಕ ವೇಗವಾಗಿ ಮತ್ತು ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕವನ್ನು ದೇಶದ ಮೂಲೆ ಮೂಲೆಗೆ ತಲುಪಿಸುವಲ್ಲಿ ಭಾರತೀಯ ರೈಲ್ವೆ ಸಹಕರಿಸಿತು ಎಂದರು.
ಆಕ್ಸಿಜನ್ ಎಕ್ಸ್‌ಪ್ರೆಸ್‌ಅನ್ನು ಸಂಪೂರ್ಣವಾಗಿ ಮಹಿಳೆಯರೇ ನಿಭಾಯಿಸುತ್ತಿರುವ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿದ ಪ್ರಧಾನಿ ಮೋದಿ, ದೇಶದ ಪ್ರತಿಯೊಬ್ಬ ಮಹಿಳೆಗೂ ಇದು ಹೆಮ್ಮೆಯ ವಿಚಾರ. ರಾಷ್ಟ್ರದ ಎಲ್ಲ ತಾಯಂದಿರು, ಸೋದರಿಯರಿಗೆ ಖುಷಿ ನೀಡುವಂತದ್ದು. ಕೇವಲ ಮಹಿಳೆಯರಿಗೆ ಮಾತ್ರವಲ್ಲ ಭಾರತದ ಪ್ರತಿಯೊಬ್ಬ ಪ್ರಜೆಯೂ ಹೆಮ್ಮೆ ಪಡುವ ವಿಚಾರವಾಗಿದೆ ಎಂದರು.
ಒಂದೆಡೆ ಖಾಲಿ ಟ್ಯಾಂಕರ್‌ಗಳನ್ನು ವಾಯುಪಡೆಯ ವಿಮಾನಗಳ ಮೂಲಕ ಆಮ್ಲಜನಕ ಘಟಕದ ವರೆಗೆ ತಲುಪಿಸುವ ಕೆಲಸ ನಡೆಯುತ್ತಿದೆ. ಮತ್ತೊಂದೆಡೆ ಹೊಸ ಆಮ್ಲಜನಕ ಘಟಕಗಳ ಸ್ಥಾಪನೆಯ ಕೆಲಸವನ್ನು ಕೂಡ ಪೂರ್ಣಗೊಳಿಸಲಾಗುತ್ತಿದೆ. ಇದರೊಂದಿಗೆ ವಿದೇಶಗಳಿಂದ ಆಮ್ಲಜನಕ, ಆಮ್ಲಜನಕ ಸಾಂದ್ರಕಗಳು ಮತ್ತು ಕ್ರಯೋಜೆನಿಕ್ ಟ್ಯಾಂಕರ್‌ಗಳನ್ನು ದೇಶಕ್ಕೆ ತರಲಾಗುತ್ತಿದೆ. ಆಮ್ಮಜನಕ ಪೂರೈಕೆಯಲ್ಲಿ ರಾಷ್ಟ್ರದ ನೌಕಾಪಡೆ, ಭೂ ಸೇನೆ ಮತ್ತು ಡಿಆರ್‌ಡಿಒ ಸಂಸ್ಥೆಗಳು ಜೊತೆಯಾಗಿ ನಿರ್ವಹಿಸುತ್ತಿವೆ. ಅನೇಕ ವಿಜ್ಞಾನಿಗಳು, ಉದ್ಯಮದ ತಜ್ಞರು ಮತ್ತು ತಾಂತ್ರಿಕ ಸಿಬ್ಬಂದಿ ಸಮರೋಪಾದಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮೋದಿ ಹೇಳಿದರು.
ಸಾಮಾನ್ಯವಾಗಿ ದಿನಕ್ಕೆ 900 ಮೆಟ್ರಿಕ್ ಟನ್ ದ್ರವರೂಪದ ವೈದ್ಯಕೀಯ ಆಮ್ಮಜನಕ ಉತ್ಪತ್ತಿಯಾಗುತ್ತಿತ್ತು. ಇದೀಗ 9,500 ಮೆಟ್ರಿಕ್ ಟನ್ ದ್ರವರೂಪದ ಆಮ್ಲಜನಕವನ್ನು ಉತ್ಪಾದನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.