ಔರಂಗಾಬಾದ್: ‘ಮಹಾರಾಷ್ಟ್ರದ ಪರ್ಭಣಿ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಆಮ್ಲಜನಕ ಪೂರೈಸುವ ಪೈಪ್‌ಲೈನ್ ಮೇಲೆ ಮರದ ಕೊಂಬೆ ಬಿದ್ದು, ಆಮ್ಲಜನಕ ಸೋರಿಕೆ ಉಂಟಾಗಿತ್ತು. ಈ ವೇಳೆ ಅಪಾಯದಲ್ಲಿ ಸಿಲುಕಿದ್ದ 14 ರೋಗಿಗಳನ್ನು ಆಸ್ಪತ್ರೆಯ ಸಿಬ್ಬಂದಿ ರಕ್ಷಿಸಿದ್ದಾರೆ’ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು.
‘ಮಂಗಳವಾರ ರಾತ್ರಿ ಆಸ್ಪತ್ರೆಯ ಸಿಬ್ಬಂದಿ ಆಮ್ಲಜನಕ ಸೋರಿಕೆಯನ್ನು ಗಮನಿಸಿದ್ದಾರೆ. ಆ ಕೂಡಲೇ ಅವರು ರೋಗಿಗಳನ್ನು ರಕ್ಷಿಸಿ, ಅವರಿಗೆ ಉಸಿರಾಟಕ್ಕಾಗಿ ಜಂಬೋ ಆಕ್ಸಿಜನ್ ಸಿಲಿಂಡರ್‌ಗಳನ್ನು ಅಳವಡಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ಸಂಜಯ್ ಕುಂದೇತ್ಕರ್ ಅವರು ಹೇಳಿದರು.
‘ಆಮ್ಲಜನಕ ಶೇಖರಣಾ ಟ್ಯಾಂಕ್‌ನಿಂದ ತುರ್ತು ಚಿಕಿತ್ಸಾ ವಿಭಾಗಕ್ಕೆ ಆಮ್ಲಜನಕ ಪೂರೈಸುತ್ತಿದ್ದ ಪೈಪ್‌ಲೈನ್ ಮೇಲೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಮರದ ಕೊಂಬೆಯೊಂದು ಬಿದ್ದಿದೆ. ಇದರಿಂದಾಗಿ ಆಮ್ಲಜನಕದಲ್ಲಿ ಸೋರಿಕೆಯಾಗಿದೆ. ಈ ಬಗ್ಗೆ ತಿಳಿಯುತ್ತಿದ್ದಂತೆ ತುರ್ತು ಚಿಕಿತ್ಸಾ ವಿಭಾಗದಲ್ಲಿದ್ದ 14 ರೋಗಿಗಳಿಗೆ ಜಂಬೋ ಆಕ್ಸಿಜನ್ ಸಿಲಿಂಡರ್‌ಗಳನ್ನು ಅಳವಡಿಸಲಾಯಿತು’ ಎಂದು ಅವರು ಮಾಹಿತಿ ನೀಡಿದರು.
‘2–3 ನಿಮಿಷಗಳ ಕಾಲ ಆಮ್ಲಜನಕ ಪೂರೈಕೆಯಲ್ಲಿ ತಡೆಯುಂಟಾಗಿದೆ. ಆದರೆ ಪೈಪ್‌ಲೈನ್ ಅನ್ನು 2 ಗಂಟೆಯೊಳಗೆ ರಿಪೇರಿ ಮಾಡಲಾಗಿದೆ. ಈ ಘಟನೆಯಲ್ಲಿ ಯಾವುದೇ ಸಾವು–ನೋವು ಸಂಭವಿಸಿಲ್ಲ. ಆಮ್ಲಜನಕ ಪೂರೈಕೆಯನ್ನು ಬೆಳಿಗ್ಗೆ 4 ಗಂಟೆಯೊಳಗೆ ಮರುಸ್ಥಾಪಿಸಲಾಯಿತು’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.