ನವದೆಹಲಿ: ‘ಆಮ್ಲಜನಕ ಪೂರೈಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದೆ. ಹೀಗಾಗಿ ರೋಗಿಗಳನ್ನು ದಾಖಲಿಸುವುದನ್ನು ಪುನಃ ಆರಂಭಿಸಲಾಗಿದೆ’ ಎಂದು ದೆಹಲಿಯ ಆಸ್ಪತ್ರೆಗಳು ಮಂಗಳವಾರ ಹೇಳಿವೆ.
‘ಆಮ್ಲಜನಕ ಪೂರೈಕೆಯಲ್ಲಿ ಸುಧಾರಣೆಯಾಗಿದೆ. ಇವತ್ತು ಪರಿಸ್ಥಿತಿ ಸ್ವಲ್ಪ ನಿಯಂತ್ರಣದಲ್ಲಿದೆ. ಪ್ರತಿನಿತ್ಯ 3.6 ಮೆಟ್ರಿಕ್ ಟನ್‌ಗಳಷ್ಟು ಆಮ್ಲಜನಕದ ಅವಶ್ಯಕತೆ ಇರುತ್ತದೆ. ಸದ್ಯ ನಮ್ಮ ಬಳಿ ಆರು ಟನ್‌ಗಳಷ್ಟು ಆಮ್ಲಜನಕವಿದೆ’ ಎಂದು ಜೈಪುರ ಗೋಲ್ಡನ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಡಿ.ಕೆ ಬಲೂಜಾ ಅವರು ತಿಳಿಸಿದರು.
‘ಭಾರತೀಯ ರೈಲ್ವೆ ಆಮ್ಲಜನಕ ವಿತರಣೆ ಮಾಡಿದೆ. ದೆಹಲಿ ಸರ್ಕಾರವು ಕಳೆದ ರಾತ್ರಿ ತುರ್ತು ಪರಿಸ್ಥಿತಿಯ ವೇಳೆ ಇನಾಕ್ಸ್ ಕಂಪನಿಯಿಂದ ಆಮ್ಲಜನಕ ಪೂರೈಕೆಗೆ ಕ್ರಮ ಕೈಗೊಂಡಿದೆ. ಇದಕ್ಕಾಗಿ ನಿಮಗೆ ಧನ್ಯವಾದಗಳು. ನಾವೆಲ್ಲರೂ ಒಟ್ಟಾಗಿ ಈ ಬಿಕ್ಕಟ್ಟನ್ನು ಎದುರಿಸೋಣ’ ಎಂದು ಆಸ್ಪತ್ರೆ ಟ್ವೀಟ್ ಮಾಡಿದೆ.
ಕಳೆದ ವಾರ ಜೈಪುರ ಗೋಲ್ಡನ್ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ 20 ರೋಗಿಗಳು ಮೃತಪಟ್ಟಿದ್ದರು.
‘ಪ್ರಸ್ತುತ ಆಮ್ಲಜನಕ ಪೂರೈಕೆಯಲ್ಲಿ ಕೊರತೆಯಿಲ್ಲ. ನಮ್ಮಲ್ಲಿರುವ ಆಮ್ಲಜನಕವು ಆರು ರಿಂದ ಏಳು ಗಂಟೆಗಳ ಕಾಲ ಉಳಿಯಬಹುದು. ಸದ್ಯ ಆಸ್ಪತ್ರೆಯಲ್ಲಿ 270 ರೋಗಿಗಳು ಇದ್ದಾರೆ. ಪ್ರತಿನಿತ್ಯ 8 ಮೆಟ್ರಿಕ್ ಟನ್‌ನ ಅವಶ್ಯಕತೆ ಇದೆ. ನಾವು ಆಸ್ಪತ್ರೆಯಲ್ಲಿ ರೋಗಿಗಳನ್ನು ದಾಖಲಾತಿಯನ್ನು ಪುನರಾರಂಭಗೊಳಿಸಿದ್ಧೇವೆ’ ಎಂದು ಬಾತ್ರಾ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಸುಧಾಂಶು ಬಿ. ತಿಳಿಸಿದರು.
ಶ್ರೀ ಗಂಗಾರಾಮ್ ಆಸ್ಪತ್ರೆಗೂ ಇಂದು ಮುಂಜಾನೆ 20 ಮೆಟ್ರಿಕ್ ಟನ್‌ಗಳಷ್ಟು ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ಪೂರೈಕೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.