ADVERTISEMENT

ಚಿದಂಬರಂ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್ 

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 12:43 IST
Last Updated 15 ನವೆಂಬರ್ 2019, 12:43 IST
ಪಿ. ಚಿದಂಬಂರ
ಪಿ. ಚಿದಂಬಂರ   

ನವದೆಹಲಿ: ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಚಿದಂಬರಂಗೆ ಜಾಮೀನು ನೀಡಿ ಜೈಲಿನಿಂದ ಬಿಡುಗಡೆ ಮಾಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ ಎಂದು ಹೈಕೋರ್ಟ್ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಆಗಸ್ಟ್ ತಿಂಗಳಲ್ಲಿ ಸಿಬಿಐ ಚಿದಂಬರಂ ಅವರನ್ನು ಬಂಧಿಸಿತ್ತು. ಕಳೆದ ತಿಂಗಳು ಸುಪ್ರೀಂಕೋರ್ಟ್ ಇವರಿಗೆ ಜಾಮೀನು ನೀಡುವ ಮುನ್ನ ಜಾರಿ ನಿರ್ದೇಶನಾಲಯವು ಇವರನ್ನು ಅಕ್ರಮ ಹಣ ವ್ಯವಹಾರ ಪ್ರಕರಣದಲ್ಲಿ ವಶಕ್ಕೆ ತೆಗೆದುಕೊಂಡಿತ್ತು.

ತಿಹಾರ್ ಜೈಲಿನಲ್ಲಿ ಚಿದಂಬರಂ ಅವರು 85 ದಿನಗಳನ್ನು ಕಳೆದಿದ್ದಾರೆ.

ಜಾಮೀನು ಅರ್ಜಿಯನ್ನು ತಳ್ಳಿ ಪ್ರತಿಕ್ರಿಯಿಸಿದ ಹೈಕೋರ್ಟ್ ನ್ಯಾಯಮೂರ್ತಿ ಸುರೇಶ್ ಕೈತ್, ಈ ಪ್ರಕರಣಗಳಲ್ಲಿ ಚಿದಂಬರಂ ಸಕ್ರಿಯ ಹಾಗೂ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಗಂಭೀರ ಸ್ವರೂಪದ ಪ್ರಕರಣಗಳು ಎಂದಿದ್ದಾರೆ.

ಕಳೆದ ವಾರ ಜಾಮೀನು ಅರ್ಜಿ ಬಗ್ಗೆ ಮೌಖಿಕ ವಿಚಾರಣೆ ಅಂತ್ಯಗೊಳಿಸಿದ ಹೈಕೋರ್ಟ್, ಅಕ್ರಮ ಹಣ ವ್ಯವಹಾರ ಪ್ರಕರಣವು ಘೋರ ಅಪರಾಧ ಎಂದು ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.