ನವದೆಹಲಿ: ದೆಹಲಿಯ ಯಶೋಭೂಮಿಯಲ್ಲಿ ಹೊಸದಾಗಿ ನಿರ್ಮಿಸಲಾದ ಇಂಡಿಯಾ ಇಂಟರ್ ನ್ಯಾಷನಲ್ ಕನ್ವೆನ್ಶನ್ ಮತ್ತು ಎಕ್ಸ್‌ಪೋ ಸೆಂಟರ್ (IICC)ನಲ್ಲಿ ಆಯೋಜನೆಗೊಂಡಿದ್ದ ಎರಡು ದಿನಗಳ ಸಂಸದೀಯ ಸ್ಪೀಕರ್‌ಗಳ ಶೃಂಗಸಭೆ(ಪಿ20) ಶನಿವಾರ (ಅಕ್ಟೋಬರ್ 14) ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಈ ಸಮಾವೇಶದ ಯಶಸ್ಸಿಗೆ ಸಹಕಾರ ನೀಡಿದ ಎಲ್ಲಾ ಗಣ್ಯರಿಗೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಧನ್ಯವಾದ ಸಲ್ಲಿಸಿದರು. ಪಿ20 ಶೃಂಗಸಭೆಯಲ್ಲಿ, ಎಸ್‌ಡಿಜಿ(ಸುಸ್ಥಿರ ಅಭಿವೃದ್ಧಿ ಗುರಿ)ಗಳನ್ನು ವೇಗಗೊಳಿಸುವುದು, ಹಸಿರು ಶಕ್ತಿ, ಮಹಿಳಾ ನೇತೃತ್ವದ ಅಭಿವೃದ್ಧಿ ಮತ್ತು ಸಾರ್ವಜನಿಕ ಡಿಜಿಟಲ್ ವೇದಿಕೆಗಳ ಮೂಲಕ ಜನರ ಜೀವನದಲ್ಲಿ ಪರಿವರ್ತನೆ ಎಂಬ ನಾಲ್ಕು ವಿಚಾರಗಳ ಮೇಲೆ ಉನ್ನತ ಮಟ್ಟದ ಚರ್ಚೆ ನಡೆದವು.
ಜಿ20 ಪ್ರಕ್ರಿಯೆಗೆ ಪರಿಣಾಮಕಾರಿ ಮತ್ತು ಅರ್ಥಪೂರ್ಣ ಸಂಸದೀಯ ಕೊಡುಗೆಯನ್ನು ನೀಡಲು ಜಂಟಿಯಾಗಿ ಕಾರ್ಯ ನಿರ್ವಹಿಸುವ ತಮ್ಮ ಬದ್ಧತೆಯನ್ನು ಜಿ20 ನಾಯಕರು ಪುನರುಚ್ಚರಿಸಿದರು. "ಎಸ್‌ಡಿಜಿ, ಹಸಿರು ಶಕ್ತಿ, ಮಹಿಳಾ ನೇತೃತ್ವದ ಅಭಿವೃದ್ಧಿ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳ ಕುರಿತು ನಡೆದ ಚರ್ಚೆಗಳು ಮತ್ತು ನಿಮ್ಮ ಅಮೂಲ್ಯವಾದ ಅಭಿಪ್ರಾಯಗಳು ಜಿ20 ಪ್ರಕ್ರಿಯೆಯನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ" ಎಂದು ಸ್ವೀಕರ್ ಓಂ ಬಿರ್ಲಾ ಸಮಾರೋಪ ಸಮಾರಂಭದಲ್ಲಿ ಹೇಳಿದರು.
ಅನೇಕ ಸದಸ್ಯರು ಸಮಾವೇಶದಲ್ಲಿ ಚರ್ಚೆಗೆ ಆಯ್ಕೆಯಾದ ಅಭಿವೃದ್ಧಿ ಕಾರ್ಯಸೂಚಿಯನ್ನು ಮೀರಿ ಪ್ರಮುಖ ಜಾಗತಿಕ ಸವಾಲುಗಳನ್ನು ಎತ್ತಿ ತೋರಿಸಿದ್ದಾರೆ. ಇವುಗಳು ಇತ್ತೀಚಿನ ಭೌಗೋಳಿಕ-ರಾಜಕೀಯ ಘಟನೆಗಳು ಮತ್ತು ಆರ್ಥಿಕ ಸಮಸ್ಯೆಗಳನ್ನು ಒಳಗೊಂಡಿವೆ. ಹಲವಾರು ಸದಸ್ಯರು ಪಶ್ಚಿಮ ಏಷ್ಯಾ, ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿಯನ್ನು ಸಹ ಉಲ್ಲೇಖಿಸಿದ್ದಾರೆ ಎಂದು ಬಿರ್ಲಾ ಹೇಳಿದರು.
9ನೇ ಜಿ20 ಸಂಸದೀಯ ಸ್ಪೀಕರ್‌ಗಳ ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಮತ್ತು ಅದರ ಆತ್ಮೀಯ ಆತಿಥ್ಯಕ್ಕಾಗಿ ಭಾರತದ ಸಂಸತ್ತಿಗೆ ಸಭೆಯಲ್ಲಿ ಭಾಗವಹಿಸಿದ ಗಣ್ಯರು ಧನ್ಯವಾದ ಅರ್ಪಿಸಿದರು.
ಪ್ರಧಾನಿ ಮೋದಿ ನಿನ್ನೆ (ಶುಕ್ರವಾರ) ಶೃಂಗಸಭೆಯನ್ನು ಉದ್ಘಾಟಿಸಿದ್ದರು. ಕಾರ್ಯಕ್ರಮದಲ್ಲಿ ಗಣ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಶೃಂಗಸಭೆ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಪರಿಕಲ್ಪನೆಯನ್ನು ಒತ್ತಿ ಹೇಳುತ್ತದೆ. ಇದು ಪ್ರಾಚೀನ ಭಾರತೀಯ ತತ್ವವಾದ ‘ವಸುದೈವ ಕುಟುಂಬಕಂ’ನಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.