ನವದೆಹಲಿ: ಕೋಲ್ಕತ್ತದ (ಸರ್ಕಾರಿ) ಆರ್.ಜಿ ಕರ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಸಂಬಂಧ ಪದ್ಮ ಪ್ರಶಸ್ತಿ ಪುರಸ್ಕೃತ 71 ವೈದ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಪತ್ರ ಬರೆದಿದ್ದಾರೆ.
ಆರೋಪಿಗಳಿಗೆ ಕಠಿಣ ಶಿಕ್ಷೆ ಹಾಗೂ ಆರೋಗ್ಯ ವೃತ್ತಿಪರರ ವಿರುದ್ಧದ ಹಿಂಸಾಚಾರವನ್ನು ತಡೆಯಲು ಪ್ರಧಾನಿ ಅವರು ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
'ಪದ್ಮ ಪ್ರಶಸ್ತಿ ಪುರಸ್ಕೃತ ವೈದ್ಯರಾದ ನಾವು, ಕೋಲ್ಕತ್ತದ ಆರ್.ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚೆಗೆ ಸಂಭವಿಸಿದ ಭಯಾನಕ ಘಟನೆ ಬಗ್ಗೆ ತೀವ್ರ ಕಳವಳ ಮತ್ತು ವೇದನೆಯಿಂದ ನಿಮಗೆ ಪತ್ರ ಬರೆಯುತ್ತಿದ್ದೇವೆ. ನಮ್ಮ ರಾಷ್ಟ್ರದ ಮುಖ್ಯಸ್ಥರಾಗಿ, ಈ ಆತಂಕಕಾರಿ ಪರಿಸ್ಥಿತಿ ಪರಿಹರಿಸಲು ನಿಮ್ಮ ಮಧ್ಯಸ್ಥಿಕೆಗೆ ನಾವು ಮನವಿ ಮಾಡುತ್ತೇವೆ. ಇಂತಹ ಕ್ರೂರ ಕೃತ್ಯಗಳು ವೈದ್ಯಕೀಯ ವೃತ್ತಿಪರರ ಸೇವೆಯ ತಳಹದಿಯನ್ನೇ ಅಲುಗಾಡಿಸುತ್ತವೆ. ವಿಶೇಷವಾಗಿ ಮಹಿಳೆಯರು ಮತ್ತು ಆರೋಗ್ಯ ವೃತ್ತಿಪರರ ವಿರುದ್ಧದ ಹಿಂಸಾಚಾರವನ್ನು ತಡೆಯುವ ಅಗತ್ಯವಿದೆ. ಸಂತ್ರಸ್ತರ ಕುಟುಂಬದೊಂದಿಗೆ ನಾವು ನಿಲ್ಲುತ್ತೇವೆ. ಅವರ ನೋವು, ನಷ್ಟವನ್ನು ಊಹಿಸಲು ಅಸಾಧ್ಯ. ಆರೋಗ್ಯ ವೃತ್ತಿಪರರ ಸುರಕ್ಷತೆ ಮತ್ತು ಘನತೆಯನ್ನು ರಕ್ಷಿಸಬೇಕು' ಎಂದು ಮನವಿ ಮಾಡಿದ್ದಾರೆ.
ಅಲ್ಲದೇ ಆರೋಗ್ಯ ಸಿಬ್ಬಂದಿಯನ್ನು ಹಿಂಸಾಚಾರದಿಂದ ರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಪ್ರತ್ಯೇಕ ಕಾನೂನು ಜಾರಿಗೆ ತರಬೇಕು ವೈದ್ಯರು ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಸುಪ್ರೀಂ ಕೋರ್ಟ್:
ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದಕ್ಕೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದು, ವಿಚಾರಣೆಯನ್ನು ನಾಳೆಗೆ (ಆ. 20) ನಿಗದಿಪಡಿಸಿದೆ.
ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ‘ಆರ್.ಜಿ.ಕರ್ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳು’ ಎಂಬ ಶೀರ್ಷಿಕೆ ಯಡಿ ಪಟ್ಟಿ ಮಾಡಿರುವ ದೂರನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ನಾಳೆ (ಆಗಸ್ಟ್ 20) ವಿಚಾರಣೆಗೆ ಕೈಗೆತ್ತಿ ಕೊಳ್ಳಲಿದೆ. ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಪೀಠದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.