ADVERTISEMENT

ಟಾಟಾ ನೀಡಿದ್ದ ಪ್ರೋತ್ಸಾಹ: ಕಲಾವಿದ ಮೆಲುಕು ಹಾಕಿದ್ದು ಹೀಗೆ...

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 23:30 IST
Last Updated 10 ಅಕ್ಟೋಬರ್ 2024, 23:30 IST
ರತನ್‌ ಟಾಟಾ
ರತನ್‌ ಟಾಟಾ   

ಮುಂಬೈ: ಉದ್ಯಮ ಕ್ಷೇತ್ರದಲ್ಲಿ ಅಚ್ಚಳಿಯದ ಸಾಧನೆ ಮಾಡಿರುವ ರತನ್‌ ಟಾಟಾ ಅವರು ಚಿತ್ರಕಲೆ ಸೇರಿದಂತೆ ವಿವಿಧ ಕ್ಷೇತ್ರಗಳ ಕಲಾವಿದರನ್ನೂ ಪ್ರೋತ್ಸಾಹಿಸುವ ಮೂಲಕ ಗಮನ ಸೆಳೆದಿದ್ದರು.

ಟಾಟಾ ಅವರು ತಮಗೆ ನೀಡಿದ್ದ ಪ್ರೋತ್ಸಾಹ, ತಮ್ಮ ಕಲಾಕೃತಿಗಳ ಪ್ರದರ್ಶನಕ್ಕೆ ದೇಶದ ಪ್ರತಿಷ್ಠಿತ ತಾಜ್‌ ಮಹಲ್‌ ಪ್ಯಾಲೇಸ್‌ ಹೋಟೆಲ್‌ನಲ್ಲಿ ಅವಕಾಶ ನೀಡಿದ್ದನ್ನು ಚಿತ್ರ ಕಲಾವಿದ ನೀಲೇಶ್‌ ಮೋಹಿತೆ ಸ್ಮರಿಸಿಕೊಂಡಿದ್ದಾರೆ.

30 ವರ್ಷದ ಮೋಹಿತೆ, ದಕ್ಷಿಣ ಮುಂಬೈನ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದಾರೆ.

ADVERTISEMENT

‘ಕೋವಿಡ್‌–19 ಪಿಡುಗಿನ ಸಂದರ್ಭ. ಒಂದು ದಿನ ನಾನು ಟಾಟಾ ಅವರನ್ನು ಭೇಟಿ ಮಾಡಿ, ನಾನು ರಚಿಸಿದ್ದ ಕಲಾಕೃತಿಯೊಂದನ್ನು ಅವರಿಗೆ ಉಡುಗೊರೆಯಾಗಿ ನೀಡಿದೆ. ಈಗಲೂ ಆ ಕಲಾಕೃತಿ ಕೊಲಾಬಾದಲ್ಲಿರುವ ಟಾಟಾ ಅವರ ಬಂಗಲೆಯ ಗೋಡೆಯನ್ನಲಂಕರಿಸಿದೆ’ ಎಂದು ಮೋಹಿತೆ ಹೇಳಿದರು.

‘ನಾನು ಕಲಾಕೃತಿ ನೀಡಿದ್ದಕ್ಕೆ ಪ್ರತಿಯಾಗಿ ಅವರು ಲಕೋಟೆಯೊಂದರಲ್ಲಿ ಚೆಕ್‌ ಇಟ್ಟು ನನಗೆ ನೀಡಿದರು. ಚೆಕ್‌ ಬದಲು ನನಗೆ ಉದ್ಯೋಗ ನೀಡುವಂತೆ ಅವರಿಗೆ ಮನವಿ ಮಾಡಿದೆ’.

‘ಅವರ ಮೂಲಕ ಉದ್ಯೋಗ ಪಡೆಯಬೇಕು ಎನ್ನುವ ನನ್ನ ಆಸೆ ಕೈಗೂಡಲಿಲ್ಲ. ಆದರೆ, ಕೋವಿಡ್‌ ಪಿಡುಗು ಕೊನೆಗೊಂಡ ವಾರದ ನಂತರ, ತಾಜ್‌ ಮಹಲ್‌ ಪ್ಯಾಲೇಸ್‌ ಹೋಟೆಲ್‌ನಲ್ಲಿ ನನ್ನ ಚಿತ್ರಕಲಾಕೃತಿಗಳ ಪ್ರದರ್ಶನ ಆಯೋಜನೆಗೆ ನನಗೆ ಅವಕಾಶ ಕೊಟ್ಟರು’ ಎಂದು ಮೋಹಿತೆ ಕೃತಜ್ಞತೆಯಿಂದ ಸ್ಮರಿಸಿದರು.

‘ಅದ್ಭುತ ವ್ಯಕ್ತಿ..’

'ರತನ್‌ ಟಾಟಾ ಒಬ್ಬ ಅದ್ಭುತ ವ್ಯಕ್ತಿ...’ – ಟಾಟಾ ಸಮೂಹದ ಮಾಜಿ ಉದ್ಯೋಗಿ 90 ವರ್ಷದ ಆದಿ ಪಾವರಿ ಎಂಬುವವರು ರತನ್‌ ಟಾಟಾ ಅವರನ್ನು ಬಣ್ಣಿಸಿದ ಪರಿಯಿದು. ಮುಂಬೈನ ಪಾರಸಿ ಕಾಲೊನಿ ನಿವಾಸಿಯಾಗಿರುವ ಪಾವರಿ ಪಿಟಿಐ ವಿಡಿಯೊ ಜೊತೆ ಮಾತನಾಡಿ‘ನಿಶ್ಚಿತವಾಗಿಯೂ ರತನ್‌ ಟಾಟಾ ಒಬ್ಬ ಅದ್ಭುತ ವ್ಯಕ್ತಿ ಅವರಿಗೆ ಸ್ವರ್ಗವೇ ಪ್ರಾಪ್ತಿಯಾಗುತ್ತದೆ’ ಎಂದು ಗದ್ಗದಿತರಾದರು. ‘ನಾನು ಟಾಟಾ ಟೆಕ್ಸ್‌ಟೈಲ್‌ ಕಂಪನಿಯಲ್ಲಿದ್ದೆ. ರತನ್‌ ಟಾಟಾ ತಂದೆ ನವಲ್‌ ಟಾಟಾ ಆಗ ಚುನಾವಣೆಗೆ ಸ್ಪರ್ಧಿಸುತ್ತಿದ್ದರು. ರತನ್‌ ಸಹೋದರ ಜಿಮ್ಮಿ ಟಾಟಾ ನನ್ನ ಅಧೀನದಲ್ಲಿ ನೌಕರಿ ಮಾಡುತ್ತಿದ್ದರು ಅವರು ಟಾಟಾ ಅಹಮದಾಬಾದ್‌ ಘಟಕದ ಉಸ್ತುವಾರಿಯಾಗಿದ್ದರು. ಒಟ್ಟಾರೆ ಟಾಟಾ ಕುಟುಂಬ ಕುರಿತು ವರ್ಣಿಸಲು ಪದಗಳೇ ಸಾಲುವುದಿಲ್ಲ’ ಎಂದು ಪಾವರಿ ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.