ನವದೆಹಲಿ: ಪಾಕಿಸ್ತಾನದ ಗಡಿಯೊಳಗೆಪ್ರವೇಶಿಸಿದ್ದ ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಬುಧವಾರ ಹೇಳಿಕೊಂಡಿದೆ.
ಭಾರತೀಯ ವಾಯು ವಲಯ ಉಲ್ಲಂಘಿಸಿ ದಾಳಿ ನಡೆಸುವ ಪ್ರಯತ್ನ ಮಾಡಿರುವ ಪಾಕಿಸ್ತಾನ ವಾಯುಪಡೆ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆ ಹಿಮ್ಮೆಟ್ಟಿಸಿರುವ ಬೆನ್ನಲೇ ಪಾಕಿಸ್ತಾನ ಈ ಹೇಳಿಕೆ ಬಿಡುಗಡೆ ಮಾಡಿದೆ. ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದ್ದು, ಒಬ್ಬ ಪೈಲಟ್‌ನನ್ನು ಬಂಧಿಸಲಾಗಿದೆ ಎಂದಿದೆ.
ಪಾಕಿಸ್ತಾನದ ಹೇಳಿಕೆಗೆ ಭಾರತೀಯ ವಾಯು ಪಡೆ ಅಥವಾ ಭಾರತೀಯ ರಕ್ಷಣಾ ಸಚಿವಾಲಯದಿಂದತಕ್ಷಣದಲ್ಲಿ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
’ಪಾಕಿಸ್ತಾನ ವಾಯುಪಡೆ ಭಾರತದ ಎರಡು ಯುದ್ಧ ವಿಮಾನಗಳನ್ನು ಪಾಕಿಸ್ತಾನದ ವಾಯು ವಲಯದಲ್ಲಿ ಹೊಡೆದುರುಳಿಸಿದೆ. ಒಂದು ವಿಮಾನ ಆಜಾದ್ ಕಾಶ್ಮೀರದಲ್ಲಿ ಹಾಗೂ ಮತ್ತೊಂದು ಭಾರತ ಆಕ್ರಮಿತ ಕಾಶ್ಮೀರದಲ್ಲಿ ಬಿದ್ದಿದೆ. ಪಾಕಿಸ್ತಾನ ಸೇನೆಯು ಒಬ್ಬ ಭಾರತೀಯ ವಾಯುಪಡೆ ಪೈಲಟ್‌ನನ್ನು ಬಂಧಿಸಿದೆ’ ಎಂದು ಪಾಕಿಸ್ತಾನದ ಇಂಟರ್ ಸರ್ವಿಸ್ ಪಬ್ಲಿಕ್ ರಿಲೇಷನ್ಸ್ ಡಿಜಿ, ಮೇಜರ್ ಜನರಲ್ ಆಸಿಫ್ ಘಪೂರ್ ಟ್ವೀಟಿಸಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಹ ಬುಧವಾರ ಬೆಳಿಗ್ಗೆ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದು, ’ಪಾಕಿಸ್ತಾನದ ವಾಯು ವಲಯದಲ್ಲಿಯೇ ಹಾರಾಟ ನಡೆಸಿರುವ ಪಾಕಿಸ್ತಾನ ವಾಯುಪಡೆ ಯುದ್ಧ ವಿಮಾನಗಳು ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಸಮೀಪ ಗುರಿಯ ಮೇಲೆ ದಾಳಿ ನಡೆಸಿವೆ’ ಎಂದಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಆಜಾದ್ ಕಾಶ್ಮೀರವೆಂದು ಹಾಗೂ ಜಮ್ಮು ಮತ್ತು ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರವೆಂದು ಪಾಕಿಸ್ತಾನ ಕರೆಯುತ್ತದೆ.
’ಕಾರ್ಯಾಚರಣೆಯನ್ನು ಮುಂದುವರಿಸುವ ಇರಾದೆ ನಮಗಿಲ್ಲ, ಆದರೆ ಅ ರೀತಿ ಮಾಡುವ ಒತ್ತಡ ಸೃಷ್ಟಿಯಾದಲ್ಲಿ ನಾವು ಸಮರ್ಥರಾಗಿದ್ದೇವೆ. ಹಾಗಾಗಿಯೇ ಸಾಕಷ್ಟು ಬೆಳಕಿರುವಾಗಲೇ ಸ್ವರಕ್ಷಣೆಗೆ ಇರುವ ಸಾಮರ್ಥ್ಯ ತೋರುವ ಮೂಲಕ ಎಚ್ಚರಿಕೆ ಕ್ರಮವನ್ನು ಅನುಸರಿಸಿದ್ದೇವೆ’ ಎಂದು ಪ್ರಕಟಣೆ ಹೇಳಿದೆ.
‘ಪ್ರಬುದ್ಧ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ ಈ ವಿಚಾರಗಳನ್ನು ಬಗೆಹರಿಸಿಕೊಳ್ಳಲು ಶಾಂತಿ ಮಾತುಕತೆಗೆ ಒಂದು ಅವಕಾಶ ನೀಡುವುದಾಗಿ ಆಶಿಸುತ್ತೇವೆ. ನಾವು ಮತ್ತೊಂದು ದಾರಿ ಹಿಡಿಯಲು ಇಚ್ಛಿಸುವುದಿಲ್ಲ’ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.