ಕಥುವಾ (ಜಮ್ಮು ಮತ್ತು ಕಾಶ್ಮೀರ): ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ಮುಂದುವರಿಸಿದರೆ ಪಾಕಿಸ್ತಾನವು ಮೂರು ಹೋಳಾಗಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಶುಕ್ರವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಪಾಕ್‌ಗೆ ಎಚ್ಚರಿಕೆ ನೀಡಿದ ಯೋಗಿ, 'ಪಾಕಿಸ್ತಾನ ಬೆಲೆ ತೆರಬೇಕಾಗುತ್ತದೆ ಎಂಬುದು ಪಾಕ್ ಬೆಂಬಲಿತ ಉಗ್ರರಿಗೂ ಗೊತ್ತಿದೆ. ಇದು (ಭಯೋತ್ಪಾದನೆಯು) ಪಾಕಿಸ್ತಾನವನ್ನು ಮೂರು ಭಾಗಗಳಾಗಿ ವಿಭಜಿಸಲು ಕಾರಣವಾಗಬಹುದು' ಎಂದು ಹೇಳಿದ್ದಾರೆ.
'ಪಾಕಿಸ್ತಾನ ಆಕ್ರಮಿತ ಕಾಶ್ಮೀರವು (ಪಿಒಕೆ) ಭಾರತದೊಂದಿಗೆ ವಿಲೀನಗೊಳ್ಳಲು ಸಜ್ಜಾಗಿದೆ. ಅಲ್ಲಿನ ಜನರು ಪಾಕಿಸ್ತಾನದಿಂದ ಮುಕ್ತಿ ಬಯಸುತ್ತಿದ್ದಾರೆ. ಅವರು ಅಭಿವೃದ್ಧಿ, ಪಡಿತರ, ಶಾಂತಿ ಮತ್ತು ಆಯುಷ್ಮಾನ್ ಆರೋಗ್ಯ ಚೀಟಿಗಳನ್ನು ಬಯಸುತ್ತಿದ್ದಾರೆ. ಆದರೆ, ಇದೆಲ್ಲ ಸಾಧ್ಯವಿರುವುದು ಭಾರತದಲ್ಲಿ ಮಾತ್ರ' ಎಂದು ಪ್ರತಿಪಾದಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಒತ್ತಾಯಿಸಿದ ಉತ್ತರ ಪ್ರದೇಶ ಸಿಎಂ, ಈ ಪ್ರದೇಶದಲ್ಲಿ ಉತ್ತಮ ಆಡಳಿತ, ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿಗಾಗಿ ನಿಮ್ಮ ಮುಂದಿರುವ ಏಕೈಕ ಆಯ್ಕೆ ಇದು ಎಂದಿದ್ದಾರೆ.
ಪಾಕಿಸ್ತಾನದ ಆರ್ಥಿಕ ದುಸ್ಥಿತಿಯನ್ನು ಉಲ್ಲೇಖಿಸಿ, 'ಪಾಕ್ ಪರಿಸ್ಥಿತಿಯು ಭಿಕ್ಷಾಪಾತ್ರೆಯೊಂದಿಗೆ ತಿರುಗುವವಂತಾಗಿದೆ. ಬಲೂಚಿಸ್ತಾನ ಪ್ರಾಂತ್ಯದ ಜನರನ್ನು ವಿದೇಶಿಗರಂತೆ ನೋಡಲಾಗುತ್ತಿದೆ. ಹೀಗಾಗಿ ಆ ಭಾಗದವರು ಪಾಕಿಸ್ತಾನದೊಂದಿಗೆ ಉಳಿಯುವುದಿಲ್ಲ ಎಂದು ಹೇಳುತ್ತಿದ್ದಾರೆ' ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ವಿರುದ್ಧ ದೃಢ ನಿಲುವು ಹೊಂದಿದ್ದಾರೆ ಎಂದಿರುವ ಯೋಗಿ, ಸಿಂಧೂ ನದಿ ನೀರಿನ ಹಂಚಿಕೆ ಕುರಿತು, 'ನೀರು ಮತ್ತು ಭಯೋತ್ಪಾದನೆ ಒಟ್ಟಿಗೆ ಹರಿಯಲಾರವು' ಎಂದು ಹೇಳಿದ್ದಾರೆ.
ಪಾಕಿಸ್ತಾನ ಬೆಂಬಲದೊಂದಿಗೆ ಭಾರತದಲ್ಲಿ ಭಯೋತ್ಪಾದನೆ ಹರಡಲು ಯಾರಾದರು ಪ್ರಯತ್ನಿಸಿದರೆ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ಸೇರಿದಂತೆ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ ಅವರು, ಇಲ್ಲಿನ ನಾಯಕರು ಜಮ್ಮು ಮತ್ತು ಕಾಶ್ಮೀರದ 'ಪ್ರಭುಗಳಂತೆ' ವರ್ತಿಸಿದ್ದರು. ಸರ್ಕಾರದ ಹಣದಲ್ಲಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದರು. ಆದರೆ, ಇನ್ನು ಮುಂದೆ ಅದೆಲ್ಲ ನಡೆಯುವುದಿಲ್ಲ ಎಂದು ಕುಟುಕಿದ್ದಾರೆ.
90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮಿರ ವಿಧಾನಸಭೆಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಸೆಪ್ಟೆಂಬರ್ 18ರಂದು ಮೊದಲ ಹಂತದಲ್ಲಿ 24 ಕ್ಷೇತ್ರಗಳಿಗೆ ಮತ್ತು ಸೆಪ್ಟೆಂಬರ್ 25ರಂದು 2ನೇ ಹಂತದಲ್ಲಿ 26 ಕ್ಷೇತ್ರಗಳಿಗೆ ಮತದಾನವಾಗಿದೆ.
ಅಕ್ಟೋಬರ್ 1ರಂದು 40 ಕ್ಷೇತ್ರಗಳಿಗೆ ಅಂತಿಮ ಹಂತದಲ್ಲಿ ಮತದಾನವಾಗಲಿದೆ. ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.