ADVERTISEMENT

ಪಾಕಿಸ್ತಾನದ ವಶದಲ್ಲಿ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌? ವಿಡಿಯೊ ಬಿಡುಗಡೆ

ಏಜೆನ್ಸೀಸ್
Published 27 ಫೆಬ್ರುವರಿ 2019, 14:37 IST
Last Updated 27 ಫೆಬ್ರುವರಿ 2019, 14:37 IST
ಗುರುತು ಹಾಕಿರುವವರು ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌
ಗುರುತು ಹಾಕಿರುವವರು ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌    

ನವದೆಹಲಿ: ಭಾರತೀಯ ವಾಯುಪಡೆಯ ಒಬ್ಬ ಪೈಲಟ್‌ ಕಾಣೆಯಾಗಿರುವುದಾಗಿ ಭಾರತ ಸರ್ಕಾರ ಸ್ಪಷ್ಟಪಡಿಸಿದ್ದು, ಪಾಕಿಸ್ತಾನವು ಪೈಲಟ್‌ ತನ್ನ ವಶದಲ್ಲಿರುವುದಾಗಿ ಘೋಷಿಸಿದೆ. ಭಾರತೀಯ ವಾಯುಪಡೆಯ ಮಿಗ್‌ 21 ಯುದ್ಧ ವಿಮಾನದ ಪೈಲಟ್‌ ಅಭಿನಂದನ್‌ ವರ್ಥಮಾನ್‌ ಅವರನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದಿದೆ ಎನ್ನಲಾಗುತ್ತಿದೆ.

ಭಾರತದ ವಾಯು ವಲಯ ಪ್ರವೇಶಿಸಿದ ಪಾಕಿಸ್ತಾನದ ಯುದ್ಧ ವಿಮಾನವನ್ನು ಭಾರತದ ಮಿಗ್‌ 21 ಯುದ್ಧ ವಿಮಾನ ಹೊಡೆದುರುಳಿಸಿದೆ. ಇದೇ ಕಾರ್ಯಾಚರಣೆಯಲ್ಲಿ ಭಾರತದ ಒಂದು ಮಿಗ್‌ 21 ಯುದ್ಧ ವಿಮಾನ ಪತನಗೊಂಡಿದ್ದು, ಪೈಲಟ್‌ ಕಾಣೆಯಾಗಿದ್ದಾರೆ. ಪೈಲಟ್‌ ನಮ್ಮ ವಶದಲ್ಲಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಅದರ ಸತ್ಯಾಸತ್ಯತೆಕುರಿತು ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇವೆ’ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್‌ ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನ ಭಾರತದ ಪೈಲಟ್‌ನನ್ನು ವಶಕ್ಕೆ ಪಡೆದಿರುವ ಕುರಿತು ವಿಡಿಯೊ ಹರಿದಾಡುತ್ತಿದ್ದು, ಇಬ್ಬರು ಪೈಲಟ್‌ಗಳನ್ನು ವಶಕ್ಕೆ ಪಡೆದಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಪಾಕಿಸ್ತಾನದ ಮೇಜರ್‌ ಜನರಲ್‌ ಆಸಿಫ್‌ ಘಫೂರ್‌, ‘ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವರನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಂಡಿದ್ದೇವೆ; ಒಬ್ಬ ಗಾಯಗೊಂಡಿದ್ದು ಸೂಕ್ತ ವೈದ್ಯಕೀಯ ನೆರವು ನೀಡಲಾಗಿದೆ’ ಎಂದು ಹೇಳಿಕೊಂಡಿದ್ದಾರೆ. ಆದರೆ, ಭಾರತ ಮತ್ತೊಬ್ಬ ಪೈಲಟ್‌ ಕುರಿತು ಯಾವುದೇ ವಿಚಾರ ಪ್ರಸ್ತಾಪಿಸಿಲ್ಲ.

ADVERTISEMENT

ಪೈಲಟ್‌ ಕಣ್ಣಿಗೆ ಬಟ್ಟೆ ಕಟ್ಟಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ವಾಯುಪಡೆಯ ಪೈಲಟ್‌ ಸಮವಸ್ತ್ರ ಧರಿಸಿರುವ ಅಭಿನಂದನ್‌ ಅವರ ಕೈಗಳನ್ನು ಹಿಂದಕ್ಕೆ ಕಟ್ಟಲಾಗಿದೆ ಹಾಗೂ ಮೂಗಿನಿಂದ ರಕ್ತಸ್ರಾವ ಆಗುತ್ತಿರುವುದನ್ನು ನೋಡಬಹುದಾಗಿದೆ. ‘ನನಗೆ ಗಾಯವಾಗಿದೆ’ ಎಂದು ಪೈಲಟ್‌ ವಿಡಿಯೊದಲ್ಲಿ ಹೇಳುತ್ತಿದ್ದಾರೆ; ಹಿಂದಿನಿಂದ ವ್ಯಕ್ತಿಯೊಬ್ಬ ಮತ್ತೊಮ್ಮೆ ಮೊದಲಿನಿಂದ ಹೇಳುವಂತೆ ಆಗ್ರಹಿಸುತ್ತಿದ್ದಾನೆ. ‘ನನ್ನ ಹೆಸರು ವಿಂಗ್‌ ಕಮಾಂಡರ್‌ ಅಭಿನಂದನ್‌. ನನ್ನ ಸರ್ವಿಸ್‌ ಸಂಖ್ಯೆ 27981. ನಾನು ಪೈಲಟ್‌. ನಾನು ಹಿಂದೂ ಧರ್ಮದವನು’ ಎಂದಿದ್ದಾರೆ.

ಮತ್ತೊಮ್ಮೆ ಹೇಳು ಎಂದು ಹಿಂದಿನಿಂದ ಧ್ವನಿ ಕೇಳುತ್ತದೆ, ಅದಕ್ಕೆ ಪೈಲಟ್‌ ‘ಕ್ಷಮಿಸಿ ಸರ್‌, ನಿಮಗೆ ಹೇಳಲು ನನಗೆ ಅಷ್ಟು ಮಾತ್ರವೇ ಅನುಮತಿ ಇದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ, ಯಾವ ಸ್ವಾಡ್ರಾನ್‌(ತುಕಡಿ)? ಎಂದು ಕೇಳಿದ್ದಾನೆ, ಅದಕ್ಕೆ ‘ನಾನು ಅದನ್ನು ಹೇಳುವಂತಿಲ್ಲ’ ಎಂದಿದ್ದಾರೆ.

‘ನನಗೆ ಕೊಂಚ ಮಾಹಿತಿ ಸಿಗಬಹುದೇ? ನಾನು ಈಗ ಪಾಕಿಸ್ತಾನದ ಸೇನೆಯೊಂದಿಗೆ ಇದ್ದೇನೆಯೇ?’ ಎಂಬ ಪೈಲಟ್‌ ಪ್ರಶ್ನೆಯೊಂದಿಗೆ ವಿಡಿಯೊ ಅಂತ್ಯಗೊಳ್ಳುತ್ತದೆ.

ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರ ಚಿತ್ರವನ್ನು ಪಾಕಿಸ್ತಾನದ ಜರ್ನಲಿಸ್ಟ್‌ಒಬ್ಬರು ಸಹ ಪ್ರಕಟಿಸಿಕೊಂಡಿದ್ದಾರೆ.ಅಭಿನಂದನ್‌ ಅವರಿಗೆ ಸೇರಿದ ಕೆಲವು ದಾಖಲೆಗಳನ್ನೂ ಸಹ ದಿ ನ್ಯೂಸ್‌.ಕಾಮ್‌ ಪ್ರಕಟಿಸಿದೆ.

ಪಾಕಿಸ್ತಾನದ ವಶದಲ್ಲಿರುವಮಿಗ್‌ 21 ಯುದ್ಧ ವಿಮಾನದ ಪೈಲಟ್‌ ಅಭಿನಂದನ್‌ ಅವರಿಗೆ ಯಾವುದೇ ರೀತಿಯ ಹಾನಿ ಆಗಬಾರದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪಾಕಿಸ್ತಾನಕ್ಕೆ ತಿಳಿಸಿದೆ. ಜೊತೆಗೆ ಅವರನ್ನು ಸುರಕ್ಷಿತವಾಗಿ ವಾಪಸ್‌ ಕಳುಹಿಸಬೇಕೆಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.