ADVERTISEMENT

ಪಾಕಿಸ್ತಾನ ವಾಯುಪಡೆ ಪೈಲಟ್‌ಗೆ ಚಚ್ಚಿದರು ಪಿಒಕೆ ಜನ

ಏಜೆನ್ಸೀಸ್
Published 2 ಮಾರ್ಚ್ 2019, 11:51 IST
Last Updated 2 ಮಾರ್ಚ್ 2019, 11:51 IST
   

ಗಡಿ ನಿಯಂತ್ರಣ ರೇಖೆಯ ವಾಯು ವಲಯದಲ್ಲಿ ನಡೆದ ವೈಮಾನಿಕ ಕದನದಲ್ಲಿ ಭಾರತದ ಮಿಗ್‌ 21 ಮತ್ತು ಪಾಕಿಸ್ತಾನದ ಎಫ್‌ 16 ಪತನಗೊಂಡವು.ಪೈಲಟ್‌ಗಳು ಪ್ಯಾರಾಚೂಟ್‌ ಬಳಸಿ ಜಿಗಿದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನೆಲೆಯಾದರು.ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ಅಲ್ಲಿನ ಜನರಿಂದ ಪಾಕಿಸ್ತಾನ ಸೇನೆಯ ವಶಕ್ಕೆಸಿಲುಕಿದರೆ,ಮತ್ತೊಂದು ಕಡೆ ಪಾಕಿಸ್ತಾನದ ಎಫ್‌–16 ಯುದ್ಧ ವಿಮಾನದ ಪೈಲಟ್‌ ವಿಂಗ್‌ ಕಮಾಂಡರ್‌ ಶಾಹಜಾಜ್‌–ಉದ್‌–ದಿನ್‌ ಸಹ ಸ್ಥಳೀಯರಿಂದಲೇಹಲ್ಲೆಗೆ ಒಳಗಾದರು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಕೆಳಕ್ಕಿಳಿದ ಪಾಕಿಸ್ತಾನ ವಾಯುಪಡೆಯ ಶಾಹಜಾಜ್‌ರನ್ನು ಭಾರತೀಯನೆಂದು ತಪ್ಪಾಗಿ ಗ್ರಹಿಸಿಕೊಂಡ ಸ್ಥಳೀಯ ಗುಂಪು ಮನಬಂದಂತೆಥಳಿಸಿತ್ತು. ಪಾಕಿಸ್ತಾನ ವಾಯುಪಡೆಯ ಎಫ್‌–16 ಪೈಲಟ್‌ಶಾಹಜಾಜ್‌ ಎಂಬುದನ್ನು ಜರ್ನಲಿಸ್ಟ್‌ ಆದಿತ್ಯ ರಾಜ್ ಕೌಲ್‌ ಹಾಗೂ ರಷ್ಯಾ ಟಿವಿ ಚಾನೆಲ್‌ನ ಅಜಯ್‌ ಜಂದ್ಯಾಲ್‌ ಖಚಿತಪಡಿಸಿರುವುದಾಗಿ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಪಾಕಿಸ್ತಾನದ ಎಫ್‌–16 ಪತನದ ಬಗ್ಗೆ ಲಂಡನ್‌ ಮೂಲದ ವಕೀಲ ಖಾಲಿದ್‌ ಉಮರ್‌ ಮೊದಲ ಬಾರಿಗೆ ವರದಿ ಮಾಡಿದ್ದರು. ಪೈಲಟ್‌ ಶಾಹಜಾಜ್‌ ಅವರ ಸಂಬಂಧಿಕರು ಉಮರ್‌ಗೆ ಮಾಹಿತಿ ನೀಡಿದ್ದರು ಎಂದು ಫಸ್ಟ್‌ಪೋಸ್ಟ್‌ನ ಪ್ರವೀಣ್‌ ಸ್ವಾಮಿ ಪ್ರಸ್ತಾಪಿಸಿದ್ದಾರೆ.

ADVERTISEMENT

ಉಮರ್‌ ಹೇಳುವಂತೆ, ಎಫ್‌–16 ಯುದ್ಧ ವಿಮಾನದಿಂದ ಜಿಗಿದ ಶಾಹಜಾಜ್‌ ನೌಶೆರಾದಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ವರೆಗೂ ಚಾಚಿರುವ ಲ್ಯಾಮ್‌ ಕಣಿವೆಯಲ್ಲಿ ಇಳಿದಿದ್ದಾರೆ. ಉದ್ರಿಕ್ತ ಗುಂಪು ಅವರನ್ನು ಭಾರತೀಯ ವಾಯುಪಡೆಯ ಪೈಲಟ್‌ ಎಂದು ಭಾವಿಸಿ ಥಳಿಸಿದೆ.

ಪಾಕಿಸ್ತಾನ ವಾಯುಪಡೆಯ ಸ್ಕ್ವಾಡ್ರನ್‌ 19ರ ವಿಂಗ್‌ ಕಮಾಂಡರ್‌ ಶಾಹಜಾಜ್‌ ಅವರ ತಂದೆ ಏರ್‌ ಮಾರ್ಷಲ್‌ ಆಗಿದ್ದವರು. ಅವರು ಎಫ್‌–16 ಹಾಗೂ ಮಿರಾಜ್‌ 2000 ಎರಡನ್ನೂ ಚಲಾಯಿಸಿದ ಅನುಭವ ಹೊಂದಿದ್ದರು.

’ಭಾರತದ ಎರಡು ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಹಾಗೂ ಇಬ್ಬರು ಭಾರತೀಯ ಪೈಲಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಒಬ್ಬ ಪೈಲಟ್‌ ಪಾಕಿಸ್ತಾನ ಸೇನೆಯ ವಶದಲ್ಲಿದ್ದಾರೆ ಹಾಗೂ ಮತ್ತೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದು ಬುಧವಾರ ಪಾಕಿಸ್ತಾನ ಸೇನಾ ವಕ್ತಾರ ಮೇಜರ್‌ ಜನರಲ್‌ ಆಸಿಫ್‌ ಘಫೂರ್‌ ಟ್ವೀಟ್‌ ಮಾಡಿದ್ದರು.

ಘಫೂರ್‌ ಅವರು ಪ್ರಸ್ತಾಪಿಸಿದ್ದ ಎರಡನೇ ಪೈಲಟ್‌, ಬಹುಶಃ ಶಾಹಜಾಜ್‌ ಆಗಿದ್ದರು ಎಂದು ಭಾರತದ ಮೂಲಗಳಿಂದ ತಿಳಿದು ಬಂದಿರುವುದಾಗಿ‍‍ಪ್ರವೀಣ್‌ ಸ್ವಾಮಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.