ADVERTISEMENT

ಬೇಹುಗಾರಿಕಾ ಪ್ರಕರಣ: ಎನ್‌ಐಎ ಚಾರ್ಜ್‌ಶೀಟ್‌

ಪಿಟಿಐ
Published 19 ಜುಲೈ 2023, 22:30 IST
Last Updated 19 ಜುಲೈ 2023, 22:30 IST
ಎನ್‌ಐಎ
ಎನ್‌ಐಎ   

ನವದೆಹಲಿ: ಆಂಧ್ರ ಪ್ರದೇಶದಲ್ಲಿ ಈ ವರ್ಷದ ಆರಂಭದಲ್ಲಿ ಪತ್ತೆಯಾದ ಭಾರತೀಯ ನೌಕಾಪಡೆಗೆ ಸಂಬಂಧಿಸಿದ ಬೇಹುಗಾರಿಕಾ ಪ್ರಕರಣದಲ್ಲಿ ಶಂಕಿತ ಪಾಕಿಸ್ತಾನಿ ಪ್ರಜೆ ಸೇರಿದಂತೆ ಇಬ್ಬರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಚಾರ್ಜ್‌ ಶೀಟ್‌ ಸಲ್ಲಿಸಿದೆ.

ಉತ್ತರ ಪ್ರದೇಶದ ಆಕಾಶ್‌ ಸೋಲಂಕಿ (21) ಮತ್ತು ತಲೆಮರೆಸಿಕೊಂಡಿರುವ ಪಾಕಿಸ್ತಾನಿ ಕಾರ್ಯಕರ್ತ ಮೀರ್‌ ಬಾಲಾಜ್‌ ಖಾನ್‌ ವಿರುದ್ಧ ಐಪಿಸಿ ಮತ್ತು ಯುಎಪಿಎ ಕಾಯ್ದೆಯ ವಿವಿಧ ಕಲಂಗಳಡಿ, ವಿಜಯವಾಡದ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ ಎಂದು ಎನ್‌ಐಎ ವಕ್ತಾರ ತಿಳಿಸಿದ್ದಾರೆ.

ಆರಂಭದಲ್ಲಿ ವಿಜಯವಾಡದ ಪೊಲೀಸ್‌ ಠಾಣೆಯಲ್ಲಿ (ಗುಪ್ತಚರ ಘಟಕ) ಈ ಕುರಿತು ಪ್ರಕರಣ ದಾಖಲಾಗಿತ್ತು. ಕ್ರಮೇಣ ಜೂನ್‌ 5ರಂದು ಅದನ್ನು ಎನ್‌ಐಎ ಮತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಸೋಲಂಕಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ADVERTISEMENT

ವಿಶಾಖಪಟ್ಟಣಂನ ನೇವಲ್ ಡಾಕ್‌ಯಾರ್ಡ್‌ನಲ್ಲಿ ಎಲೆಕ್ಟ್ರಿಕಲ್ ಆರ್ಟಿಫೈಸರ್ ರೇಡಿಯೊ ಅಪ್ರೆಂಟಿಸ್ (ಇಎಸಿ) ಆಗಿ ಕೆಲಸ ಮಾಡುತ್ತಿದ್ದ ಸೋಲಂಕಿ ಅವರು ಭಾರತೀಯ ನೌಕಾಪಡೆಯ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳಿಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ರವಾನಿಸಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ಅವರು ಶಂಕಿತ ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು. ‘ಅದಿತಿ ಚೌಹಾನ್' ಮತ್ತು ಇತರ ಅಪರಿಚಿತ ವ್ಯಕ್ತಿಗಳ ಗುರುತಿನ ಅಡಿಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.

ಮಾಹಿತಿ ನೀಡಿದ್ದಕ್ಕಾಗಿ ಸೋಲಂಕಿಯು ಮತ್ತೊಬ್ಬ ಶಂಕಿತ ಪಾಕಿಸ್ತಾನಿ ಕಾರ್ಯಕರ್ತ ಮೀರ್‌ ಬಾಲಾಜ್‌ ಖಾನ್‌ನಿಂದ ಕ್ರಿಪ್ಟೊ ಚಾನೆಲ್‌ಗಳ ಮೂಲಕ ಹಣ ಪಡೆಯುತ್ತಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ ಎಂದು ಎನ್‌ಐಎ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.