ADVERTISEMENT

ಪ್ರಶ್ನೆ ಪತ್ರಿಕೆ ಸೋರಿಕೆ: ಯುಪಿ ಪೊಲೀಸ್ ನೇಮಕಾತಿ –ಬಡ್ತಿ ಮಂಡಳಿ ಅಧ್ಯಕ್ಷೆ ವಜಾ

ಪಿಟಿಐ
Published 5 ಮಾರ್ಚ್ 2024, 9:18 IST
Last Updated 5 ಮಾರ್ಚ್ 2024, 9:18 IST
ಪ್ರಶ್ನೆ ಪತ್ರಿಕೆ ಸೋರಿಕೆ
ಪ್ರಶ್ನೆ ಪತ್ರಿಕೆ ಸೋರಿಕೆ   

ಸಾಂದರ್ಭಿಕ ಚಿತ್ರ 

ಲಖನೌ: ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಇಂದು (ಮಂಗಳವಾರ) ಪೊಲೀಸ್ ನೇಮಕಾತಿ ಮತ್ತು ಬಡ್ತಿ ಮಂಡಳಿಯ ಅಧ್ಯಕ್ಷೆ ಸ್ಥಾನದಿಂದ ರೇಣುಕಾ ಮಿಶ್ರಾ ಅವರನ್ನು ವಜಾಗೊಳಿಸಿದೆ.

ರೇಣುಕಾ ಮಿಶ್ರಾ ಅವರಿಂದ ತೆರವಾದ ಸ್ಥಾನಕ್ಕೆ ವಿಚಕ್ಷಣ ದಳದ ನಿರ್ದೇಶಕ ರಾಜೀವ್ ಕೃಷ್ಣ ಅವರನ್ನು ನಿಯೋಜಿಸುವ ಮೂಲಕ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ. ಆದರೆ, ಮಿಶ್ರಾ ಅವರಿಗೆ ಯಾವುದೇ ಹುದ್ದೆಯನ್ನು ಸೂಚಿಸಿಲ್ಲ ಎಂದು ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ.

ADVERTISEMENT

ಫೆಬ್ರುವರಿ 17 ಹಾಗೂ 18ರಂದು ನಡೆದ ಪರೀಕ್ಷೆಗೆ 48 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ಸರ್ಕಾರವು ಫೆ.24ರಂದು ಪರೀಕ್ಷೆಯನ್ನು ರದ್ದುಗೊಳಿಸಿರುವುದಷ್ಟೇ ಅಲ್ಲದೆ, ಆರು ತಿಂಗಳೊಳಗೆ ಮರು ಪರೀಕ್ಷೆ ನಡೆಸುವಂತೆ ಆದೇಶಿಸಿತ್ತು.

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ಮೂಲಕ ತನಿಖೆ ನಡೆಸಲಾಗುವುದು. ಜತೆಗೆ, ಅರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ಈವರೆಗೆ 240ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.