ADVERTISEMENT

ಯುಜಿಸಿ–ನೆಟ್ ರದ್ದು | ‘ಪೇಪರ್ ಲೀಕ್ ಸರ್ಕಾರ’; ಕೇಂದ್ರದ ವಿರುದ್ಧ ಕಾಂಗ್ರೆಸ್

ಪಿಟಿಐ
Published 20 ಜೂನ್ 2024, 3:28 IST
Last Updated 20 ಜೂನ್ 2024, 3:28 IST
<div class="paragraphs"><p>ಬಿಜೆಪಿ, ಕಾಂಗ್ರೆಸ್‌</p></div>

ಬಿಜೆಪಿ, ಕಾಂಗ್ರೆಸ್‌

   

ನವದೆಹಲಿ: ಯುಜಿಸಿ–ನೆಟ್‌ ಪರೀಕ್ಷೆ ರದ್ದು ಮಾಡಿರುವ ಕುರಿತು ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ‘ಪೇಪರ್‌ ಲೀಕ್‌ ಸರ್ಕಾರ’ ಎಂದು ಟೀಕಿಸಿದೆ.

ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿನ ಅಕ್ರಮಗಳ ಕುರಿತು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಪ್ರಧಾನಿ ನರೇಂದ್ರ ಮೋದಿ, ನೀವು ಪರೀಕ್ಷೆಗಳ ಬಗ್ಗೆ ಸಾಕಷ್ಟು ಚರ್ಚಿಸುತ್ತೀರಿ. ಅದೇ ರೀತಿ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಕುರಿತು ಯಾವಾಗ ಚರ್ಚೆ ನಡೆಸುತ್ತೀರಿ. ನೀಟ್‌ ಪರೀಕ್ಷೆಯನ್ನು ಯಾವಾಗ ರದ್ದುಗೊಳಿಸಲಾಗುತ್ತದೆ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪ್ರಶ್ನಿಸಿದ್ದಾರೆ.

ADVERTISEMENT

ಇದು ಪ್ರಧಾನಿ ಮೋದಿ ಸರ್ಕಾರದ ದುರಹಂಕಾರದ ಸೋಲು. ಇದರಿಂದಾಗಿ ಅವರು ದೇಶದ ಯುವಕರ ಭವಿಷ್ಯವನ್ನು ತುಳಿಯುವ ಹೇಯ ಪ್ರಯತ್ನವನ್ನು ಮಾಡಿದ್ದಾರೆ. ನೀಟ್‌ ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವರು ಮೊದಲು ಹೇಳಿದ್ದರು. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ, ಗುಜರಾತ್‌ ಮತ್ತು ಹರಿಯಾಣದಲ್ಲಿ ಹಲವು ಮಂದಿಯನ್ನು ಬಂಧಿಸಿದ ಬಳಿಕ ಪರೀಕ್ಷೆಯಲ್ಲಿ ಕೆಲವು ಹಗರಣ ನಡೆದಿದೆ ಎಂದು ಒಪ್ಪಿಕೊಂಡರು. ಯುಜಿಸಿ–ನೆಟ್‌ ಪರೀಕ್ಷೆಯನ್ನು ರದ್ದುಗೊಳಿಸಿರುವುದು ಲಕ್ಷಾಂತರ ವಿದ್ಯಾರ್ಥಿಗಳ ಮಹತ್ವಾಕಾಂಕ್ಷೆಗೆ ಸಿಕ್ಕ ಜಯವಾಗಿದೆ ಎಂದು ಖರ್ಗೆ ಹೇಳಿದ್ದಾರೆ.

ಜೂನ್ 18ರಂದು ದೇಶದ ವಿವಿಧ ನಗರಗಳಲ್ಲಿ ಯುಜಿಸಿ–ನೆಟ್‌ ಪರೀಕ್ಷೆಯನ್ನು ನಡೆಸಲಾಗಿತ್ತು. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆಯ ಶಂಕೆಯಿಂದ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಇದಕ್ಕೂ ಮೊದಲು ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈಗ ಯುಜಿಸಿ–ನೆಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಮೋದಿ ಸರ್ಕಾರವು ‘ಪೇಪರ್‌ ಲೀಕ್‌ ಸರ್ಕಾರ’ವಾಗಿದ್ದು ದೇಶದ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕಾಂಗ್ರೆಸ್‌ ಪಕ್ಷ ‘ಎಕ್ಸ್‌’ನಲ್ಲಿ ಆರೋಪಿಸಿದೆ.

ಪರೀಕ್ಷೆ ರದ್ದಾಗಿರುವ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ‘ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಅಲಕ್ಷ್ಯದಿಂದ ಯುವಜನತೆಗೆ ಹಾನಿಯಾಗುತ್ತಿದೆ. ನೀಟ್‌ ಪರೀಕ್ಷೆ ಹಗರಣದ ಸುದ್ದಿ ಬಳಿಕ, ಇದೀಗ ಜೂನ್‌ 18ರಂದು ನಡೆದ ನೆಟ್‌ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಶಿಕ್ಷಣ ಸಚಿವರು ಈ ಲೋಪಕ್ಕೆ ಹೊಣೆಗಾರರಾಗುತ್ತಾರೆಯೇ?, ಈ ಹೊಣೆಗಾರಿಕೆಯನ್ನು ಸರಿಪಡಿಸಲಾಗುತ್ತದೆಯೇ’ ಎಂದು ಪ್ರಶ್ನಿಸಿದ್ದಾರೆ.

ಪರೀಕ್ಷೆಯ ಪಾರದರ್ಶಕತೆಗೆ ಧಕ್ಕೆಯುಂಟಾಗಿರಬಹುದೆಂಬ ಮಾಹಿತಿಗಳು ಲಭಿಸಿರುವುದರಿಂದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ನಡೆಸಿದ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಶಿಕ್ಷಣ ಸಚಿವಾಲಯ ಬುಧವಾರ ಆದೇಶಿಸಿದೆ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.