ADVERTISEMENT

ವಸೂಲಾಗದ ಸಾಲದ ಪ್ರಮಾಣ ಏರಿಕೆ: ಆರ್‌ಬಿಐ ವೈಫಲ್ಯ

ಪಿಟಿಐ
Published 27 ಆಗಸ್ಟ್ 2018, 18:57 IST
Last Updated 27 ಆಗಸ್ಟ್ 2018, 18:57 IST
   

ನವದೆಹಲಿ : ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ವಸೂಲಾಗದ ಸಾಲದ ಪ್ರಮಾಣವು (ಎನ್‌ಪಿಎ) ಏರಿಕೆಯಾಗುತ್ತಿರುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳದಿರಲು ಏನು ಕಾರಣ ಎಂದು ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಯು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಪ್ರಶ್ನಿಸಿದೆ.

2015ರ ಡಿಸೆಂಬರ್‌ನಲ್ಲಿ ‘ಎನ್‌ಪಿಎ’ ಪರಾಮರ್ಶೆಗೆ ಚಾಲನೆ ನೀಡುವ ಮೊದಲೇ ಕೇಂದ್ರೀಯ ಬ್ಯಾಂಕ್‌ ಎಚ್ಚೆತ್ತುಕೊಂಡಿರಲಿಲ್ಲ ಎಂದು ಸ್ಥಾಯಿ ಸಮಿತಿಯ ವರದಿಯಲ್ಲಿ ಹೇಳಲಾಗಿದೆ. ಕಾಂಗ್ರೆಸ್‌ ಮುಖಂಡ ಎಂ. ವೀರಪ್ಪ ಮೊಯಿಲಿ ಅಧ್ಯಕ್ಷತೆಯಲ್ಲಿನ ಸಮಿತಿಯು ಈ ವರದಿ ಸಿದ್ಧಪಡಿಸಿದೆ.

2015ರ ಮಾರ್ಚ್‌ನಿಂದ 2018ರ ಮಾರ್ಚ್‌ ಅವಧಿಯಲ್ಲಿ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿನ ಎನ್‌ಪಿಎ ಗಮನಾರ್ಹವಾಗಿ ಏರಿಕೆಯಾಗಿತ್ತು. ಇದರಿಂದಾಗಿ ಬ್ಯಾಂಕ್‌ಗಳು ₹ 5 ಲಕ್ಷ ಕೋಟಿಯನ್ನು ಭವಿಷ್ಯದ ವೆಚ್ಚಗಳಿಗಾಗಿ ತೆಗೆದು ಇರಿಸಬೇಕಾಯಿತು.

ADVERTISEMENT

‘ಎನ್‌ಪಿಎ’ ಸಮಸ್ಯೆ ನಿರ್ವಹಣೆಯಲ್ಲಿ ಆರ್‌ಬಿಐ ಕೈಗೊಂಡಿರುವ ಕ್ರಮಗಳು ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ವರದಿಯನ್ನು ಮಂಡಿಸಲಾಗುವುದು.

‘ಎನ್‌ಪಿಎ’ ಖಾತೆಗಳನ್ನು ಗುರುತಿಸುವಲ್ಲಿ ಪಾರದರ್ಶಕತೆ ಅಳವಡಿಕೆ, ನಷ್ಟ ಸರಿದೂಗಿಸುವ ವೆಚ್ಚದಲ್ಲಿ ಏರಿಕೆ, ಬಂಡವಾಳ ಮರುಭರ್ತಿ, ದಿವಾಳಿ ಸಂಹಿತೆಯ ಕಟ್ಟುನಿಟ್ಟಿನ ಜಾರಿ ಮತ್ತು ₹ 50 ಕೋಟಿಗಿಂತ ಹೆಚ್ಚಿನ ಮೊತ್ತದ ಸುಸ್ತಿ ಸಾಲ ಖಾತೆಗಳಲ್ಲಿ ವಂಚನೆ ನಡೆದಿರುವ ಸಾಧ್ಯತೆಯನ್ನು ಪರಿಶೀಲನೆಗೆ ಒಳಪಡಿಸಬೇಕು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

₹ 250 ಕೋಟಿಗಿಂತ ಹೆಚ್ಚಿನ ಮೊತ್ತದ ‘ಎನ್‌ಪಿಎ’ ಖಾತೆಗಳ ಬಗ್ಗೆ ತನಿಖಾ ಸಂಸ್ಥೆಗಳಿಂದ ಪರಿಶೀಲನೆ ನಡೆಸಲು ಮತ್ತು ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ ಸ್ಥಾಪಿಸಲು ಸಲಹೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.