ನವದೆಹಲಿ: ಭಾರತದಲ್ಲಿರುವ ಭಾಷಾ ವೈವಿಧ್ಯವೇ ದೇಶದ ಏಕತೆ ಮತ್ತು ಶಕ್ತಿಯಾಗಿದ್ದು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹಿಂದಿ ಸೇರಿದಂತೆ ಇತರೆ ಭಾರತೀಯ ಭಾಷೆಗಳ ಅಭಿವೃದ್ಧಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಹಿಂದಿ ದಿವಸ್ ಅಂಗವಾಗಿ ಸೋಮವಾರ ಸರಣಿ ಟ್ವೀಟ್‌ಗಳ ಜತೆಗೆ ವಿಡಿಯೊ ಸಂದೇಶ ನೀಡಿರುವ ಅವರು, 'ಹಿಂದಿ ಭಾಷೆ, ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಭಾರತದ ಏಕತೆ ಮತ್ತು ಸಮಗ್ರತೆಯ ಪರಿಣಾಮಕಾರಿ ಮಾಧ್ಯಮವಾಗಿದೆ’ ಎಂದು ಪ್ರತಿಪಾದಿಸಿದ್ದಾರೆ.
'ಒಂದು ದೇಶವನ್ನು ಅದರ ಗಡಿ ಮತ್ತು ಭೌಗೋಳಿಕತೆಯಿಂದ ಗುರುತಿಸಲಾಗುತ್ತದೆ. ಆದರೆ, ಒಂದು ದೇಶದ ಪ್ರಮುಖ ಗುರುತು ಎಂದರೆ ಅದು ಭಾಷೆ ಮಾತ್ರ. ಭಾಷಾ ವೈವಿಧ್ಯವೇ ಭಾರತದ ಏಕತೆ ಮತ್ತು ಶಕ್ತಿಯ ಸಂಕೇತ. ಹೀಗೆ ಭಾಷೆ, ಸಾಂಸ್ಕೃತಿಯ ವೈವಿಧ್ಯದಿಂದ ತುಂಬಿರುವ ಭಾರತವವನ್ನು ಹಿಂದಿ ಭಾಷೆ ಶತಮಾನಗಳಿಂದ ಒಗ್ಗೂಡಿಸುವ ಶಕ್ತಿಯಾಗಿದೆ’ ಎಂದು ಹೇಳಿದ್ದಾರೆ.
ಸರ್ಕಾರಿ ಅಧಿಕಾರಿಗಳು, ಬ್ಯಾಂಕ್ ಉದ್ಯೋಗಿಗಳು ತಮ್ಮ ತಮ್ಮ ಕಚೇರಿಗಳಲ್ಲಿ ಸ್ಥಳೀಯ ಭಾಷೆಯೊಂದಿಗೆ ಹಿಂದಿಯಲ್ಲೂ ವ್ಯವಹರಿಸುವಂತೆ ಅಮಿತ್ ಶಾ ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.
'ಹಿಂದಿ ದಿವಸ್ ಸಂದರ್ಭದಲ್ಲಿ, ಹಿಂದಿ ಭಾಷೆಯ ಸಬಲೀಕರಣಕ್ಕಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಹೇಳುತ್ತೇನೆ’ ಎಂದು ಹೇಳಿರುವ ಶಾ, 'ಎಲ್ಲರೂ ತಮ್ಮ ತಮ್ಮ ಮಾತೃಭಾಷೆಯೊಂದಿಗೆ ಹಿಂದಿ ಭಾಷಾ ಪ್ರಚಾರ ಮತ್ತು ರಕ್ಷಿಸುವ ಕುರಿತು ಪ್ರತಿಜ್ಞೆ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.
ಯುವ ಪೀಳಿಗೆಯನ್ನು ಹಿಂದಿ ಭಾಷೆಯತ್ತ ಆಕರ್ಷಿಸಲು ಪ್ರಯತ್ನಿಸಬೇಕು. ಪೋಷಕರು ತಮ್ಮ ಮಕ್ಕಳೊಂದಿಗೆ ಭಾರತೀಯ ಭಾಷೆಗಳಲ್ಲಿ ಮಾತನಾಡಬೇಕೆಂದುಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.