ADVERTISEMENT

ಪ್ಯಾರಾಮಿಲಿಟರಿ ಕ್ಯಾಂಟೀನ್‌ಗಳಲ್ಲಿ ಜೂನ್‌ನಿಂದ ಸ್ವದೇಶಿ ವಸ್ತುಗಳು ಮಾತ್ರ ಲಭ್ಯ

ಏಜೆನ್ಸೀಸ್
Published 13 ಮೇ 2020, 10:50 IST
Last Updated 13 ಮೇ 2020, 10:50 IST
ವಸ್ತುಗಳ ಮಾರಾಟ ಮಳಿಗೆ– ಸಾಂಕೇತಿಕ ಚಿತ್ರ
ವಸ್ತುಗಳ ಮಾರಾಟ ಮಳಿಗೆ– ಸಾಂಕೇತಿಕ ಚಿತ್ರ   

ನವದೆಹಲಿ: ದೇಶೀಯವಾಗಿ ತಯಾರಿಕೆ ಹಾಗೂ ದೇಶೀಯ ವಸ್ತುಗಳನ್ನು ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಬೆನ್ನಲ್ಲೇ ಪ್ಯಾರಾಮಿಲಿಟರಿ ಕ್ಯಾಂಟೀನ್‌ಗಳಲ್ಲಿ ಸ್ವದೇಶಿ ಉತ್ಪನ್ನಗಳನ್ನು ಮಾತ್ರವೇ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ಜೂನ್‌ 1ರಿಂದ ಪ್ಯಾರಾಮಿಲಿಟರಿ ಕ್ಯಾಂಟೀನ್‌ಗಳಲ್ಲಿ ಸ್ವದೇಶಿ ವಸ್ತುಗಳನ್ನು ಮಾತ್ರವೇ ಮಾರಾಟ ಮಾಡುವ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬುಧವಾರ ಪ್ರಕಟಿಸಿದ್ದಾರೆ.

ದೇಶದಲ್ಲಿ ತಯಾರಿಸಿರುವ ವಸ್ತುಗಳನ್ನೇ ಬಳಸುವಂತೆ ಅಮಿತ್‌ ಶಾ ಜನರಿಗೆ ಆಗ್ರಹಿಸಿದ್ದಾರೆ. ಎಲ್ಲರೂ ದೇಶೀಯ ಉತ್ಪನ್ನಗಳನ್ನೇ ಖರೀದಿಸಿದರೆ, ಮುಂದಿನ 5 ವರ್ಷಗಳಲ್ಲಿ ಭಾರತ ಸ್ವಾವಲಂಬಿ ರಾಷ್ಟ್ರವಾಗಲಿದೆ ಎಂದಿದ್ದಾರೆ.

ADVERTISEMENT

'ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳ (ಸಿಎಪಿಎಫ್‌) ಕ್ಯಾಂಟೀನ್‌ಗಳಲ್ಲಿ ದೇಶೀಯ ವಸ್ತುಗಳನ್ನೇ ಮಾರಾಟ ಮಾಡಲು ಗೃಹ ವ್ಯವಹಾರಗಳ ಸಚಿವಾಲಯ ನಿರ್ಧರಿಸಿದೆ. 2020ರ ಜೂನ್‌ 1ರಿಂದ ಇದು ದೇಶದ ಎಲ್ಲ ಸಿಎಪಿಎಫ್‌ ಕ್ಯಾಂಟಿನ್‌ಗಳಿಗೂ ಅನ್ವಯವಾಗಲಿದೆ. ಈ ಮೂಲಕ 10 ಲಕ್ಷ ಸಿಎಪಿಎಫ್‌ ಸಿಬ್ಬಂದಿಯ 50 ಲಕ್ಷ ಕುಟುಂಬಗಳು ದೇಶೀಯವಾಗಿ ಸಿದ್ಧಪಡಿಸಿದ ವಸ್ತುಗಳನ್ನೇ ಬಳಸಲಿದ್ದಾರೆ' ಎಂದು ಅಮಿತ್‌ ಶಾ ಟ್ವೀಟಿಸಿದ್ದಾರೆ.

ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳನ್ನು ಗಮನದಲ್ಲಿರಿಸಿಕೊಂಡು ಆರ್ಥಿಕತೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ₹20 ಲಕ್ಷ ಕೋಟಿ ಪ್ಯಾಕೇಜ್‌ ಘೋಷಿಸಿದ್ದಾರೆ. ಇದರೊಂದಿಗೆ ಸ್ಥಳೀಯ ತಯಾರಿಕೆಗಳನ್ನು ಪ್ರಚುರ ಪಡಿಸುವಂತೆ ಜನರಲ್ಲಿ ಕೇಳಿದ್ದಾರೆ. ದೇಶೀಯವಾಗಿ ತಯಾರಿಕೆ ಮತ್ತು ಅವುಗಳ ಬಳಕೆ ಮೂಲಕ ದೇಶವನ್ನು ಸ್ವಾವಲಂಬಿಯಾಗಿಸುವ ಗುರಿ ಹೊಂದಲಾಗಿದೆ.

ಪ್ಯಾರಾಮಿಲಿಟರಿ ಪಡೆಗಳು ಸೇವೆಯಲ್ಲಿರುವ ಸಿಬ್ಬಂದಿಗಳಿಗೆ ಹಾಗೂ ನಿವೃತ್ತಿ ಹೊಂದಿರುವ ಸಿಬ್ಬಂದಿ ಹಾಗೂ ಅವರ ಕುಟುಂಬಗಳಿಗೆ ಕ್ಯಾಂಟೀನ್‌ ವ್ಯವಸ್ಥೆ ಕಲ್ಪಿಸಿವೆ. 2006ರ ಸೆಪ್ಟೆಂಬರ್‌ 26ರಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಕೇಂದ್ರೀಯ ಪೊಲೀಸ್‌ ಕ್ಯಾಂಟೀನ್‌ ವ್ಯವಸ್ಥೆಯನ್ನು ರೂಪಿಸಿದೆ.

ಪ್ರಸ್ತುತ ದೇಶದಲ್ಲಿ 119 ಮಾಸ್ಟರ್‌ ಕ್ಯಾಂಟೀನ್‌ಗಳಿದ್ದು, ಅವು ವಿತರಣಾ ಕೇಂದ್ರಗಳಾಗಿ ಕಾರ್ಯಾಚರಿಸುತ್ತಿವೆ. ಅವುಗಳ ಅಧೀನದಲ್ಲಿ 1,778 ಕ್ಯಾಂಟೀನ್‌ಗಳು ಪ್ಯಾರಾಮಿಲಿಟರಿ ಸಿಬ್ಬಂದಿ ಹಾಗೂ ಕುಟುಂಬಗಳಿಗೆ ವಸ್ತುಗಳನ್ನು ಮಾರಾಟ ಮಾಡುತ್ತಿವೆ.

ಈ ಕ್ಯಾಂಟೀನ್‌ಗಳು ಎಲೆಕ್ಟ್ರಾನಿಕ್‌ ವಸ್ತುಗಳು, ಆಹಾರ ಸಾಮಗ್ರಿಗಳು, ಚಪ್ಪಲಿ–ಶೂಗಳು, ಸೌಂದರ್ಯವರ್ಧಕಗಳು, ದ್ವಿಚಕ್ರ ವಾಹನಗಳು, ಕಾರುಗಳು ಹಾಗೂ ಇತರೆ ಅಗತ್ಯ ವಸ್ತುಗಳನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.