ADVERTISEMENT

ಉತ್ತರ ಪ್ರದೇಶ | ‘ಕುಟುಂಬ ರಾಜಕಾರಣ’: ಬಿಜೆಪಿ ವಿರುದ್ಧ ವಿಪಕ್ಷಗಳ ವಾಗ್ಬಾಣ

ಉ.ಪ್ರ: ವಿಧಾನಸಭೆ, ವಿಧಾನಪರಿಷತ್‌ನ ಹುದ್ದೆಗಳಿಗೆ ಗಣ್ಯರ ಸಂಬಂಧಿಕರೇ ಹೆಚ್ಚು ನೇಮಕ

ಪಿಟಿಐ
Published 16 ನವೆಂಬರ್ 2024, 0:44 IST
Last Updated 16 ನವೆಂಬರ್ 2024, 0:44 IST
   

ಲಖನೌ: ‘ಉತ್ತರ ಪ್ರದೇಶ ವಿಧಾನಸಭೆ ಹಾಗೂ ವಿಧಾನಪರಿಷತ್‌ನ ಹುದ್ದೆಗಳ ಪೈಕಿ ಐದನೇ ಒಂದರಷ್ಟು ಹುದ್ದೆಗಳಲ್ಲಿ ಗಣ್ಯರ ಸಂಬಂಧಿಗಳನ್ನೇ ಭರ್ತಿ ಮಾಡಿದ್ದಾರೆ’ ಎಂದು ಮಾಧ್ಯಮದಲ್ಲಿ ಪ್ರಕಟವಾದ ವರದಿ ಮುಂದಿಟ್ಟುಕೊಂಡು, ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ‘ಕುಟುಂಬ ರಾಜಕಾರಣ’ದ ಆರೋಪ ಮಾಡಿವೆ.

ತನ್ನ ರಾಜಕೀಯ ವಿರೋಧಿಗಳತ್ತ ಯಾವಾಗಲೂ ಬಿಜೆಪಿ ಬಳಸುತ್ತಿದ್ದ ‘ಕುಟುಂಬ ರಾಜಕಾರಣ’ ಎಂಬ ವಾಗ್ಬಾಣವನ್ನು ಈಗ ವಿಪಕ್ಷಗಳು ಕೇಸರಿ ಪಕ್ಷದತ್ತಲೇ ತಿರುಗಿಸಿವೆ.

ರಾಜ್ಯ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿರುವ ಹುದ್ದೆಗಳ ಪೈಕಿ, ಐದನೇ ಒಂದರಷ್ಟು ಹುದ್ದೆಗಳಲ್ಲಿ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಸಂಬಂಧಿಕರನ್ನೇ ನೇಮಕ ಮಾಡಲಾಗಿದೆ ಎಂಬ ಬಗ್ಗೆ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ದೈನಿಕ ಇತ್ತೀಚೆಗೆ ವರದಿ ಪ್ರಕಟಿಸಿತ್ತು. 

ADVERTISEMENT

ಪ್ರಾಂತೀಯ ನಾಗರಿಕ ಸೇವೆಗಳು ಮತ್ತು ತನಿಖಾಧಿಕಾರಿಗಳು (ಆರ್‌ಒ) ಮತ್ತು ಸಹಾಯಕ ತನಿಖಾಧಿಕಾರಿಗಳ (ಎಆರ್‌ಒ) ಹುದ್ದೆಗಳ ಭರ್ತಿಗೆ ಪರೀಕ್ಷೆಗಳು ನಡೆದಿದ್ದವು. 186 ಹುದ್ದೆಗಳ ಪೈಕಿ 38 ಅಭ್ಯರ್ಥಿಗಳು ಅಧಿಕಾರಿಗಳು ಹಾಗೂ ರಾಜಕಾರಣಿಗಳೊಂದಿಗೆ ನಂಟು ಹೊಂದಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. 

ಈ ವರದಿಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಆಡಳಿತಾರೂಢ ಬಿಜೆಪಿ ವಿರುದ್ಧ ಹರಿಹಾಯ್ದಿವೆ.

ಅಂದಾಜು 2.5 ಲಕ್ಷದಷ್ಟು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. 2020–21ರಲ್ಲಿ ಎರಡು ಹಂತಗಳಲ್ಲಿ ನೇಮಕಾತಿ ಪರೀಕ್ಷೆಗಳು ನಡೆದಿದ್ದವು.

ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳ ಪೈಕಿ ಉತ್ತರ ಪ್ರದೇಶ ವಿಧಾನಸಭೆ ಸ್ಪೀಕರ್ ಅವರ ಪಿಆರ್‌ಒ ಹಾಗೂ ಅವರ ಸಹೋದರ, ಮಾಜಿ ಸಚಿವರೊಬ್ಬರ ಸೋದರ ಸಂಬಂಧಿ, ವಿಧಾನಪರಿಷತ್‌ ಸಚಿವಾಲಯ ಉಸ್ತುವಾರಿ ಅಧಿಕಾರಿಯ ಪುತ್ರ, ವಿಧಾನಸಭೆ ಸಚಿವಾಲಯದ ಉಸ್ತುವಾರಿ ಅಧಿಕಾರಿಯ ನಾಲ್ವರು ಸಂಬಂಧಿಕರು, ಸಂಸದೀಯ ವ್ಯವಹಾರಗಳ ಇಲಾಖೆ ಅಧಿಕಾರಿಯೊಬ್ಬರ ಪುತ್ರ ಹಾಗೂ ಪುತ್ರಿ, ಇಬ್ಬರು ಮಾಜಿ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ (ಒಎಸ್‌ಡಿ) ಪುತ್ರ ಸೇರಿದ್ದಾರೆ ಎಂದೂ ಪತ್ರಿಕೆ ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿಧಾನಸಭೆ ಮಾಜಿ ಸ್ಪೀಕರ್ ಹೃದಯನಾರಾಯಣ ದೀಕ್ಷಿತ್, ‘ಈ ವಿಷಯವು ನ್ಯಾಯಾಲಯದಲ್ಲಿದೆ. ಹೀಗಾಗಿ, ಈ ಕುರಿತು ಪ್ರತಿಕ್ರಿಯೆ ನೀಡುವುದು ಸರಿಯಲ್ಲ’ ಎಂದು ಹೇಳಿದ್ದಾರೆ.

‘ಈ ಪ್ರಕರಣದ ತನಿಖೆ ನಡೆಯುತ್ತಿದೆ. ಆದರೆ, ಚುನಾವಣೆ ವೇಳೆ ಟಿಕೆಟ್‌ ಹಂಚುವಾಗ ಮತ್ತು ಸರ್ಕಾರಿ ಉದ್ಯೋಗಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಬಿಜೆಪಿ ಕುಟುಂಬವಾದಕ್ಕೆ ಮಣೆ ಹಾಕುತ್ತದೆ ಎಂಬುದು ಕಂಡುಬರುತ್ತದೆ’ ಎಂದು ವಿಧಾನಪರಿಷತ್‌ನ ಸಮಾಜವಾದಿ ಪಕ್ಷದ ಸದಸ್ಯ ಅಶುತೋಷ್ ಸಿನ್ಹಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.