ADVERTISEMENT

ಅಮಿತ್‌ ಶಾ ಹೇಳಿಕೆಗೆ ಪಟ್ಟು, ಕಲಾಪಕ್ಕೆ ಅಡ್ಡಿ: 78 ಸಂಸದರ ಅಮಾನತು

ಲೋಕಸಭೆಯ 33, ರಾಜ್ಯಸಭೆಯ 45 ಸದಸ್ಯರು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 16:22 IST
Last Updated 18 ಡಿಸೆಂಬರ್ 2023, 16:22 IST
<div class="paragraphs"><p>ಅಮಾನತುಗೊಂಡ ವಿರೋಧ ಪಕ್ಷಗಳ ಸಂಸದರು ಸಂಸತ್ತಿನ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು </p></div>

ಅಮಾನತುಗೊಂಡ ವಿರೋಧ ಪಕ್ಷಗಳ ಸಂಸದರು ಸಂಸತ್ತಿನ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು

   

–ಪಿಟಿಐ ಚಿತ್ರ

ನವದೆಹಲಿ: ಸಂಸತ್‌ನ ಭದ್ರತಾ ವೈಫಲ್ಯ ವಿಷಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆಗೆ ಪಟ್ಟು ಹಿಡಿದು ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ 78 ಸದಸ್ಯರನ್ನು ಸೋಮವಾರ ಅಮಾನತು ಮಾಡಲಾಗಿದೆ.

ADVERTISEMENT

ಪ್ರತಿಪಕ್ಷಗಳು ಪಟ್ಟು ಸಡಿಲಿಸದ ಕಾರಣ ಉಭಯ ಸದನಗಳಲ್ಲಿ ಮೂರನೇ ದಿನವೂ ಸುಗಮ ಕಲಾಪ ನಡೆಯಲಿಲ್ಲ. ವಿಪಕ್ಷಗಳ ಗದ್ದಲ, ಕೋಲಾಹಲದ ನಡುವೆಯೇ ಸರ್ಕಾರವು ದೂರಸಂಪರ್ಕ ಮಸೂದೆಯಂತಹ ಪ್ರಮುಖ ಮಸೂದೆಗಳನ್ನು ಮಂಡಿಸಿತು. ಕೇಂದ್ರಾಡಳಿತ ಪ್ರದೇಶ ಪುದುಚೆರಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ 33ರಷ್ಟು ಮಹಿಳಾ ಮೀಸಲಾತಿ ನೀಡುವ ಮಸೂದೆಗಳಿಗೆ ಹೆಚ್ಚಿನ ಚರ್ಚೆಯಿಲ್ಲದೆಯೇ ಅಂಗೀಕಾರ ಪಡೆಯಿತು. 

ಡಿಎಂಕೆಯ 10, ಟಿಎಂಸಿಯ ಒಂಬತ್ತು, ಕಾಂಗ್ರೆಸ್‌ನ ಎಂಟು, ಐಯುಎಂಎಲ್, ಜೆಡಿಯು ಮತ್ತು ಆರ್‌ಎಸ್‌ಪಿಯ ತಲಾ ಒಬ್ಬರು ಸದಸ್ಯರು ಸೇರಿದಂತೆ 30 ಸದಸ್ಯರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಲೋಕಸಭೆಯಲ್ಲಿ ಹೇಳಿದರು. ಕೆ.ಜಯಕುಮಾರ್, ವಿಜಯ್‌ ವಸಂತ್ ಮತ್ತು ಅಬ್ದುಲ್‌ ಖಲೀಕ್ ಅವರ ನಡವಳಿಕೆ ಪ್ರಕರಣವನ್ನು ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸಲಾಗಿದ್ದು, ಸಮಿತಿಯು ವರದಿ ಸಲ್ಲಿಸುವವರೆಗೆ ಅವರನ್ನು ಅಮಾನತುಗೊಳಿಸುವ ಪ್ರತ್ಯೇಕ ನಿರ್ಣಯವನ್ನು ಜೋಶಿ ಮಂಡಿಸಿದರು. 

ಅಶಿಸ್ತಿನ ವರ್ತನೆ ಹಾಗೂ ಸಭಾಪತಿ ನಿರ್ದೇಶನಗಳನ್ನು ಧಿಕ್ಕರಿಸಿದ ಕಾರಣಕ್ಕೆ ರಾಜ್ಯಸಭೆಯ 45 ಸದಸ್ಯರನ್ನು ಅಮಾನತುಗೊಳಿಸಲಾಗಿದೆ. 34 ಸದಸ್ಯರನ್ನು ಚಳಿಗಾಲದ ಉಳಿದ ಅಧಿವೇಶನದ ಅವಧಿಗೆ ಹೊರ ಹಾಕಲಾಗಿದೆ. 11 ಸದಸ್ಯರ ನಡವಳಿಕೆ ಪ್ರಕರಣವನ್ನು ಸದನದ ಹಕ್ಕುಬಾಧ್ಯತಾ ಸಮಿತಿಗೆ ನೀಡಲಾಗಿದ್ದು, ಆ ವರದಿ ಬರುವವರೆಗೆ ಸದನದಿಂದ ದೂರ ಉಳಿಯುವಂತೆ ಸೂಚಿಸಲಾಗಿದೆ. 

ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ನಿರ್ದೇಶನ ನೀಡಲಾಗಿದ್ದು, ಅಲ್ಲಿಯವರೆಗೆ 11 ಸಂಸದರು ಸದನದ ಕಲಾಪಕ್ಕೆ ಹಾಜರಾಗುವಂತಿಲ್ಲ. ಚಳಿಗಾಲದ ಅಧಿವೇಶನ ಇದೇ 22ರಂದು ಮುಗಿಯಲಿದೆ. 

ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ರಾಜ್ಯಸಭೆಯ ಒಬ್ಬರು ಹಾಗೂ ಲೋಕಸಭೆಯ 13 ಸದಸ್ಯರನ್ನು ಕಳೆದ ವಾರ ಅಮಾನತುಗೊಳಿಸಲಾಗಿತ್ತು. ಅಮಾನತುಗೊಂಡಿರುವ ವಿರೋಧ ಪಕ್ಷದ ಸದಸ್ಯರ ಒಟ್ಟು ಸಂಖ್ಯೆ 92ಕ್ಕೆ ಏರಿದೆ.  

ದಿನದ ಬೆಳವಣಿಗೆ: ಲೋಕಸಭೆಯ ಕಲಾಪ ಬೆಳಿಗ್ಗೆ 11ಕ್ಕೆ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಧರಣಿ ಆರಂಭಿಸಿದರು. ಘೋಷಣೆಗಳನ್ನು ಕೂಗದಂತೆ ಸ್ಪೀಕರ್‌ ಓಂ ಬಿರ್ಲಾ ಮನವಿ ಮಾಡಿದರು. ಜೊತೆಗೆ, ಸಂಸತ್‌ ಭವನದ ಭದ್ರತೆಗೆ ಕೈಗೊಂಡ ಹೆಚ್ಚುವರಿ ಕ್ರಮಗಳ ಕುರಿತು ಮಾಹಿತಿ ನೀಡಿದರು. ಸುಗಮ ಕಲಾಪ ನಡೆಸಲು ಎಲ್ಲ ಸದಸ್ಯರು ಸಹಕಾರ ನೀಡಬೇಕು ಎಂದು ಅವರು ವಿನಂತಿಸಿದರು. ‘ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸುವುದು ಸರಿಯಲ್ಲ. ಇದು ಸದನದ ಘನತೆಯನ್ನು ಕಡಿಮೆ ಮಾಡುತ್ತದೆ’ ಎಂದೂ ಹೇಳಿದರು.ಆದರೆ ವಿಪಕ್ಷಗಳ ಸದಸ್ಯರು ಪಟ್ಟು ಬಿಡಲಿಲ್ಲ. ‘ಪ್ರತಿಭಟನೆ ಕೈ ಬಿಡುವಂತೆ ಕೈ ಮುಗಿದು ಕೇಳಿಕೊಳ್ಳುತ್ತೇನೆ’ ಎಂದು ಪ್ರಲ್ಹಾದ ಜೋಶಿ ಮನವಿ ಮಾಡಿದರು. ಆದರೂ ವಿಪಕ್ಷಗಳ ಸದಸ್ಯರು ಘೋಷಣೆ ಕೂಗುವುದನ್ನು ಮುಂದುವರಿಸಿದರು. ಗಲಾಟೆಯ ನಡುವೆಯೇ ಕೆಲಕಾಲ ಪ್ರಶ್ನೋತ್ತರದ ‘ಶಾಸ್ತ್ರ’ ನಡೆಸಲಾಯಿತು. ನಂತರ ಕಲಾಪವನ್ನು ಮಧ್ಯಾಹ್ನ 12ಕ್ಕೆ ಮುಂದೂಡಲಾಯಿತು. 

12ಕ್ಕೆ ಕಲಾಪ ಮತ್ತೆ ಶುರುವಾದಾಗ ವಿರೋಧ ಪಕ್ಷಗಳ ಸದಸ್ಯರ ಧರಣಿ ಮುಂದುವರಿಯಿತು. ಗದ್ದಲದ ನಡುವೆ ಕಾಗದ ಪತ್ರಗಳನ್ನು ಮಂಡಿಸಲಾಯಿತು. ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್‌ ಅವರು ‘ದೂರಸಂಪರ್ಕ ಮಸೂದೆ–2023’ ಅನ್ನು ಮಂಡಿಸಿದರು. ಈ ನಡುವೆ, ತಮ್ಮ ಸ್ಥಾನಗಳಿಗೆ ಹಿಂತಿರುಗುವಂತೆ ವಿಪಕ್ಷಗಳ ಸದಸ್ಯರಿಗೆ ಸಭಾಧ್ಯಕ್ಷರ ಪೀಠದಲ್ಲಿದ್ದ ರಾಜೇಂದ್ರ ಅಗರವಾಲ್‌ ಮನವಿ ಮಾಡಿದರು. ಇದಕ್ಕೆ ವಿಪಕ್ಷಗಳ ಸದಸ್ಯರು ಒಪ್ಪಲಿಲ್ಲ. ‘ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅಗರವಾಲ್‌ ಎಚ್ಚರಿಸಿದರು. ಗದ್ದಲವನ್ನು ಮತ್ತಷ್ಟು ಹೆಚ್ಚಿಸಿದರು. ಬಳಿಕ ಕಲಾಪವನ್ನು ಮಧ್ಯಾಹ್ನ 2ಕ್ಕೆ ಮುಂದೂಡಿದರು.

ಮಧ್ಯಾಹ್ನ 2ಕ್ಕೆ ಕಲಾಪ ಆರಂಭವಾದಾಗ ಅಂಚೆ ಕಚೇರಿ ಮಸೂದೆಗೆ ಅಂಗೀಕಾರ ಪಡೆಯಲಾಯಿತು. ಕಲಾಪವನ್ನು ಮತ್ತೆ 2.45ಕ್ಕೆ ಮುಂದೂಡಲಾಯಿತು. ಮಧ್ಯಾಹ್ನ 3ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆ 33 ಸದಸ್ಯರ ಅಮಾನತು ತೀರ್ಮಾನ ಪ್ರಕಟಿಸಲಾಯಿತು.

ರಾಜ್ಯಸಭೆಯ ಕಲಾಪವು ನಾಲ್ಕು ಸಲ ಮುಂದೂಡಿಕೆಯಾಯಿತು. ‘ಭದ್ರತಾ ವೈಫಲ್ಯದ ಕುರಿತು ಪ್ರಧಾನಿ ಹಾಗೂ ಗೃಹ ಸಚಿವರು ಸದನದ ಹೊರಗೆ ಹೇಳಿಕೆ ನೀಡಿದ್ದಾರೆ. ಆದರೆ, ಅವರು ಸದನದಲ್ಲಿ ಹೇಳಿಕೆ ನೀಡಲು ಸಿದ್ಧರಿಲ್ಲ’ ಎಂದು ಕಾಂಗ್ರೆಸ್‌ನ ಕೆ.ಸಿ.ವೇಣುಗೋಪಾಲ್‌, ಜೈರಾಮ್ ರಮೇಶ್ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು. ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಸದಸ್ಯರಿಗೆ ಸಭಾಪತಿ ಜಗದೀಪ್‌ ಧನಕರ್‌ ಎಚ್ಚರಿಕೆ ನೀಡಿದರು. ನಿಯಮ 267ರಡಿ ವಿರೋಧ ಪಕ್ಷಗಳ ಸದಸ್ಯರು ನೀಡಿದ್ದ 22 ನೋಟಿಸ್‌ಗಳನ್ನು ತಿರಸ್ಕರಿಸಿದರು.

ಅಮಾನತುಗೊಂಡ ಪ್ರಮುಖರು

ಲೋಕಸಭೆ: ಅಧೀರ್ ರಂಜನ್‌ ಚೌಧರಿ, ಗೌರವ್‌ ಗೊಗೊಯ್‌, ಟಿ.ಆರ್‌.ಬಾಲು, ಎ.ರಾಜಾ, ದಯಾನಿಧಿ ಮಾರನ್‌.

ರಾಜ್ಯಸಭೆ: ಕೆ.ಸಿ.ವೇಣುಗೋಪಾಲ್‌, ಜೈರಾಮ್‌ ರಮೇಶ್‌, ಸಯ್ಯದ್‌ ನಾಸಿರ್‌ ಹುಸೇನ್‌, ಎಲ್‌.ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್‌.

ವಿಪಕ್ಷಗಳ ಬೇಡಿಕೆ ಏನು?

* ಭದ್ರತಾ ವೈಫಲ್ಯದ ಕುರಿತು ಗೃಹ ಸಚಿವ ಅಮಿತ್ ಶಾ ಸದನದಲ್ಲಿ ಹೇಳಿಕೆ ನೀಡಬೇಕು. 

* ಭದ್ರತಾ ವೈಫಲ್ಯದ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ ನಡೆಯಬೇಕು. 

* ಲೋಕಸಭೆಯ ಕಲಾಪದೊಳಗೆ ನುಗ್ಗಿದ ಇಬ್ಬರು ಆರೋಪಿಗಳಿಗೆ ಪಾಸ್‌ ನೀಡಿದ ಬಿಜೆಪಿ ಸಂಸದ ಪ್ರತಾಪಸಿಂಹ ವಿರುದ್ಧ ಕ್ರಮ ಕೈಗೊಳ್ಳಬೇಕು.

ತಮ್ಮ ವರ್ತನೆ ಮೂಲಕ ಕಾಂಗ್ರೆಸ್‌ ಹಾಗೂ ಮಿತ್ರಪಕ್ಷಗಳ ಸದಸ್ಯರು ಲೋಕಸಭಾಧ್ಯಕ್ಷರು ಹಾಗೂ ರಾಜ್ಯಸಭೆಯ ಸಭಾಪತಿ ಅವರನ್ನು ಅವಮಾನಿಸಿದ್ದಾರೆ.
-ಪೀಯೂಷ್‌ ಗೋಯಲ್‌, ರಾಜ್ಯಸಭೆಯ ಸಭಾನಾಯಕ

ಪ್ರಜಾಪ್ರಭುತ್ವದ ಕೊಲೆ: ಖರ್ಗೆ ಕಿಡಿ

‘ದೇಶದಲ್ಲಿ ತೀವ್ರ ನಿರಂಕುಶವಾದ ಜಾರಿಯಲ್ಲಿದೆ. ಯಾವುದೇ ಚರ್ಚೆ ಇಲ್ಲದೆ ಪ್ರಮುಖ ಶಾಸನಗಳನ್ನು ಬಲವಂತವಾಗಿ ಅಂಗೀಕಾರ (ಬುಲ್ಡೋಜ್‌) ಪಡೆಯಲು ಸರ್ಕಾರ ಮುಂದಾಗಿದೆ’ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು. 

‘ಮೊದಲು ಅತಿಕ್ರಮಣಕಾರರು ಸಂಸತ್ತಿನ ಮೇಲೆ ದಾಳಿ ಮಾಡಿದರು. ನಂತರ ಮೋದಿ ಸರ್ಕಾರವು ಸಂಸತ್ತಿನ ಮತ್ತು ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿತು. ಸಂಸದರನ್ನು ಅಮಾನತುಗೊಳಿಸುವ ಮೂಲಕ ಪ್ರಜಾಪ್ರಭುತ್ವದ ಎಲ್ಲ ಸಿದ್ಧಾಂತಗಳನ್ನು ನಿರಂಕುಶವಾದಿ ಮೋದಿ ಸರ್ಕಾರವು ಕಸದ ಬುಟ್ಟಿಗೆ ಎಸೆಯುತ್ತಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. 

‘19 ವರ್ಷಗಳಿಂದ ಸಂಸದನಾಗಿದ್ದೇನೆ. ಮೊದಲ ಬಾರಿಗೆ ಅಮಾನತಿನ ‘ಗೌರವ’ಕ್ಕೆ ಪಾತ್ರನಾಗಿದ್ದೇನೆ’ ಎಂದು ವ್ಯಂಗ್ಯವಾಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ‘ಮೋದಿ ಆಡಳಿತದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವದ ಕೊಲೆಯಾಗಿದೆ’ ಎಂದು ಟೀಕಿಸಿದ್ದಾರೆ. 

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ‘ಸಂಸತ್‌ ಈಗ ಚರ್ಚೆ ನಡೆಸುವ ಸ್ಥಳವಾಗಿಲ್ಲ. ಅಮಾನತು ಮಾಡುವ ಸ್ಥಳವಾಗಿ ಮಾರ್ಪಟ್ಟಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.