ADVERTISEMENT

ಸಂಸತ್ ಭವನದ ಭದ್ರತಾ ವೈಫಲ್ಯ: ವಿಚಾರಣೆ ವೇಳೆ ರೋಚಕ ಅಂಶಗಳನ್ನು ಬಾಯ್ಬಿಟ್ಟ ಆರೋಪಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2023, 10:04 IST
Last Updated 16 ಡಿಸೆಂಬರ್ 2023, 10:04 IST
<div class="paragraphs"><p>ಸಾಗರ್‌ ಶರ್ಮಾ</p></div>

ಸಾಗರ್‌ ಶರ್ಮಾ

   

-ಪಿಟಿಐ ಚಿತ್ರ

ನವದೆಹಲಿ: ಲೋಕಸಭೆಯಲ್ಲಿ ಕಲಾಪ ನಡೆಯುತ್ತಿರುವಾಗಲೇ ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು ಆತಂಕ ಸೃಷ್ಟಿಸಿದ್ದ ಆರೋಪಿಗಳ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ADVERTISEMENT

ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿ ಬೆಂಕಿ ಹಚ್ಚಿಕೊಂಡು ಸಾಯುವುದು ಸೇರಿದಂತೆ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಕ್ಕೆ ನಾವು ಯೋಜನೆ ರೂಪಿಸಿದ್ದೆವು ಎಂದು ವಿಚಾರಣೆ ವೇಳೆ ಆರೋಪಿಗಳಲ್ಲಿ ಒಬ್ಬರಾದ ಲಖನೌದ ಸಾಗರ್‌ ಶರ್ಮಾ ಹೇಳಿಕೊಂಡಿರುವುದಾಗಿ ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಅಸ್ತಿತ್ವದಲ್ಲಿರುವ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ತಮ್ಮನ್ನು ತಾವು ಹೊಂದಾಣಿಕೆ ಮಾಡಿಕೊಳ್ಳದಿರಲು ನಾವು ನಿರ್ಧರಿಸಿದ್ದೆವು ಎಂದು ಶರ್ಮಾ ವಿವರಿಸಿದ್ದಾರೆ.

ಮಾಧ್ಯಮಗಳ ಗಮನ ಸೆಳೆಯುವುದು ಆರೋಪಿಗಳ ಮೊದಲ ಉದ್ದೇಶವಾಗಿತ್ತು. ಬಳಿಕ ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳುವುದಕ್ಕಾಗಿ ರಾಜಕೀಯ ಪಕ್ಷವನ್ನು ಸ್ಥಾಪಿಸುವುದು ಅತ್ಯಂತ ಪರಿಣಾಮಕಾರಿ ಮಾರ್ಗವೆಂದು ಬಯಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಮೊದಲು ಸಂಸತ್ತಿನ ಹೊರಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಿದ್ದರು. ಅಗ್ನಿ ನಿರೋಧಕ ಜೆಲ್‌ಅನ್ನು (ಫೈರ್‌ ಪ್ರೂಫ್) ದೇಹಕ್ಕೆ ಹಚ್ಚಿಕೊಂಡು, ತಮಗೆ ತಾವೇ ಬೆಂಕಿ ಹಚ್ಚಿಕೊಳ್ಳುವ ಸಂಚನ್ನು ಆರೋಪಿಗಳು ಹೆಣೆದಿದ್ದರು. ಆದಾಗ್ಯೂ, ಆ ಯೋಜನೆಯನ್ನು ಆರೋಪಿಗಳು ಕೈಬಿಟ್ಟಿದ್ದರು ಎಂದು ತನಿಖಾಧಿಕಾರಿಗಳು ವಿವರಿಸಿದ್ದಾರೆ.

ಸಂಸತ್‌ ಮೇಲಿನ ದಾಳಿಯ 22ನೇ ವರ್ಷದ ಕಹಿ ನೆನಪಿನ ದಿನವೇ ಭಾರಿ ಭದ್ರತಾ ಲೋಪದ ಘಟನೆಗೆ ಲೋಕಸಭೆ ಸಾಕ್ಷಿಯಾಯಿತು. ಡಿ.13ರಂದು ಕಲಾಪ ನಡೆಯುತ್ತಿರುವಾಗಲೇ ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು ಘೋಷಣೆಗಳನ್ನು ಕೂಗುತ್ತಾ ‘ಸ್ಮೋಕ್‌ ಕ್ಯಾನ್‌’ (ಹಳದಿ ಬಣ್ಣದ ಹೊಗೆ ಉಗುಳುವ ಕ್ಯಾನ್‌) ಹಾರಿಸಿ ದಾಂದಲೆ ಎಬ್ಬಿಸಿದ್ದರು. ಇದರಿಂದಾಗಿ, ಸದನದಲ್ಲಿ ಆತಂಕ ಸೃಷ್ಟಿಯಾಗಿತ್ತು.

ಘಟನೆಯ ಮಾಸ್ಟರ್ ಮೈಂಡ್ ಎಂದು ಹೇಳಲಾದ ಲಲಿತ್ ಝಾ ಸೇರಿದಂತೆ ಮೈಸೂರಿನ ವಿಜಯನಗರ ನಿವಾಸಿಯಾಗಿರುವ ಎಂಜಿನಿಯರಿಂಗ್ ಪದವೀಧರ ಮನೋರಂಜನ್‌ ಡಿ. ಹಾಗೂ ಲಖನೌದ ಸಾಗರ್‌ ಶರ್ಮಾ, ಹರಿಯಾಣದ ಹಿಸಾರ್‌ನ ನೀಲಂ (42) ಮತ್ತು ಮಹಾರಾಷ್ಟ್ರದ ಲಾತೂರ್‌ನ ಅಮೋಲ್ ಶಿಂದೆ (25), ಮಹೇಶ್ ಅವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಒಳಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.