ನವದೆಹಲಿ: ಲೋಕಸಭೆಯ ಸಭಾಂಗಣದಲ್ಲಿ ಜಿಗಿದ ಪ್ರಕರಣದಲ್ಲಿ ಬಂಧಿತರಾಗಿರುವ ನೀಲಂ ಆಜಾದ್ ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
ನೀಲಂ ಪರ ವಕೀಲರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ಕೋರ್ಟ್, ‘ಈ ವಿಚಾರದಲ್ಲಿ ಯಾವುದೇ ತುರ್ತು ಇಲ್ಲ, ಜನವರಿ 3ರಂದು ಪ್ರಕರಣದ ವಿಚಾರಣೆ ನಡೆಯಲಿದೆ’ ಎಂದು ತಿಳಿಸಿದೆ.
‘ನನ್ನ ಬಂಧನವು ಕಾನೂನು ಬಾಹಿರವಾಗಿದ್ದು, ನ್ಯಾಯಾಲಯದ ವಿಚಾರಣೆ ವೇಳೆ ನನ್ನ ಪರವಾಗಿ ವಾದ ಮಾಡಲು ವಕೀಲರನ್ನು ಸಂಪರ್ಕಿಸಲು ನನಗೆ ಅನುಮತಿ ನೀಡುತ್ತಿಲ್ಲ’ ಎಂದು ನೀಲಂ ಆರೋಪಿಸಿದ್ದಾರೆ.
ನೀಲಂ ಸೇರಿದಂತೆ ಆರು ಮಂದಿ ಆರೋಪಿಗಳು ಜನವರಿ 5ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಪಾಲಿಗ್ರಾಫ್ ಪರೀಕ್ಷೆಗೆ ಪೊಲೀಸರಿಂದ ಮನವಿ
ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರು ಜನ ಆರೋಪಿಗಳನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡುವಂತೆ ದೆಹಲಿ ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಅರ್ಜಿಯನ್ನು ಪರಿಶೀಲಿಸಿದ ಕೋರ್ಟ್, ವಿಚಾರಣೆಯನ್ನು ಜನವರಿ 2ಕ್ಕೆ ಮುಂದೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.