ADVERTISEMENT

ಸಂಸತ್ ಭದ್ರತೆ ಉಲ್ಲಂಘನೆ ಪ್ರಕರಣ: ಮೊಬೈಲ್ ಫೋನ್‌ ಸುಟ್ಟಿದ್ದ ಆರೋಪಿಗಳು

ಸಂಸತ್ ಭದ್ರತೆ ಉಲ್ಲಂಘನೆ ಪ್ರಕರಣ; ಸಾಕ್ಷ್ಯ ನಾಶಕ್ಕೆ ಯತ್ನ

ಪಿಟಿಐ
Published 17 ಡಿಸೆಂಬರ್ 2023, 15:19 IST
Last Updated 17 ಡಿಸೆಂಬರ್ 2023, 15:19 IST
<div class="paragraphs"><p>ಸಂಸತ್ ಭವನ</p></div>

ಸಂಸತ್ ಭವನ

   

ನವದೆಹಲಿ: ಲೋಕಸಭೆಯಲ್ಲಿ ನಡೆದ ಭದ್ರತಾ ಲೋಪ ಪ್ರಕರಣದ ಆರೋಪಿಗಳು ಸಾಕ್ಷ್ಯವನ್ನು ನಾಶಪಡಿಸುವ ಉದ್ದೇಶದಿಂದ ಮೊಬೈಲ್‌ ಫೋನ್‌ಗಳನ್ನು ಸುಟ್ಟುಹಾಕಿದ್ದರು.

ಮೊಬೈಲ್ ಫೋನ್‌ನ ಸುಟ್ಟ ಸ್ಥಿತಿಯಲ್ಲಿದ್ದ ಕೆಲವು ಚೂರುಗಳನ್ನು ಪೊಲೀಸರು ರಾಜಸ್ಥಾನದ ನಾಗೌರ್‌ ಎಂಬಲ್ಲಿ ಪತ್ತೆ ಹಚ್ಚಿ, ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ ಎಂದು ತನಿಖಾ ತಂಡದ ಅಧಿಕಾರಿಯೊಬ್ಬರು ಭಾನುವಾರ ಹೇಳಿದರು.

ADVERTISEMENT

ಆರೋಪಿಗಳ ವಿರುದ್ಧದ ಎಫ್‌ಐಆರ್‌ಗೆ ಪೊಲೀಸರು ಐಪಿಸಿಯ ಸೆಕ್ಷನ್ 201ಅನ್ನೂ (ಸಾಕ್ಷ್ಯ ನಾಶಪಡಿಸುವುದು) ಸೇರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ. 

ಪ್ರಮುಖ ಸಂಚುಕೋರ ಲಲಿತ್‌ ಝಾ ನೀಡಿದ ಮಾಹಿತಿಯಂತೆ ಮೊಬೈನ್‌ ಫೋನ್‌ನ ಚೂರುಗಳನ್ನು ಶನಿವಾರ ಪತ್ತೆ ಮಾಡಲಾಗಿದೆ.  ಝಾ, ಡಿಸೆಂಬರ್ 13ರಂದು ನಡೆದ ಘಟನೆಯ ಬೆನ್ನಲ್ಲೇ ದೆಹಲಿಯಿಂದ ರಾಜಸ್ಥಾನದ ನಾಗೌರ್‌ಗೆ ಪ್ರಯಾಣಿಸಿ ಇನ್ನೊಬ್ಬ ಆರೋಪಿ ಮಹೇಶ್‌ ಕುಮಾವತ್‌ ಜತೆ ತಂಗಿದ್ದರು. ಮರುದಿನ ಇಬ್ಬರೂ ದೆಹಲಿಯ ಕರ್ತವ್ಯ ಪಥ ಪೊಲೀಸ್‌ಠಾಣೆಯಲ್ಲಿ ಶರಣಾಗಿದ್ದರು.

ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ದೆಹಲಿ ಪೊಲೀಸ್‌ ವಿಶೇಷ ಘಟಕದ ತಂಡವು ಝಾ ಅವರನ್ನು ಶನಿವಾರ ನಾಗೌರ್‌ಗೆ ಕರೆದೊಯ್ದು ಮಾಹಿತಿ ಕಲೆಹಾಕಿದೆ. ಝಾ ಮತ್ತು ಕುಮಾವತ್‌ ಅವರು ಸಾಕ್ಷ್ಯಗಳನ್ನು ನಾಶಪಡಿಸಲು ಉದ್ದೇಶಪೂರ್ವಕವಾಗಿ ಮೊಬೈಲ್‌ ಫೋನ್‌ಗಳನ್ನು ಸುಟ್ಟುಹಾಕಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಡಿ.ಮನೋರಂಜನ್‌, ಸಾಗರ್ ಶರ್ಮಾ, ಅಮೋಲ್‌ ಶಿಂಧೆ ಮತ್ತು ನೀಲಂ ಶರ್ಮಾ ಅವರು ಈ ಪ್ರಕರಣದ ಇತರ ಆರೋಪಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.