ADVERTISEMENT

Parliament Security Breach: 7 ದಿನ ಪೊಲೀಸರ ವಶಕ್ಕೆ ಲಲಿತ್‌ ಝಾ

ಅರಾಜಕತೆ ಸೃಷ್ಟಿಸಿ ಬೇಡಿಕೆ ಈಡೇರಿಸಿಕೊಳ್ಳಲು ಬಯಸಿದ್ದ ತಂಡ– ಪೊಲೀಸರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2023, 16:03 IST
Last Updated 15 ಡಿಸೆಂಬರ್ 2023, 16:03 IST
<div class="paragraphs"><p>ಲೋಕಸಭೆಯಲ್ಲಿ ಭದ್ರತಾ ಲೋಪ</p></div>

ಲೋಕಸಭೆಯಲ್ಲಿ ಭದ್ರತಾ ಲೋಪ

   

ನವದೆಹಲಿ: ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಳ್ಳುವಂತೆ ಮಾಡಲು ತಮ್ಮ ತಂಡ ಬಯಸಿತ್ತು ಎಂದು ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದ ಪ್ರಮುಖ ಸಂಚುಕೋರ ಎನ್ನಲಾಗಿರುವ ಲಲಿತ್‌ ಝಾ ತನಿಖಾಧಿಕಾರಿಗಳಿಗೆ ತಿಳಿಸಿರುವುದಾಗಿ ದೆಹಲಿ ಪೊಲೀಸರು ಶುಕ್ರವಾರ ಕೋರ್ಟ್‌ನಲ್ಲಿ ಹೇಳಿದ್ದಾರೆ.

ಇಡೀ ಪಿತೂರಿಯನ್ನು ಬಯಲು ಮಾಡಲು ಝಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕೆಂದು ಪೊಲೀಸರು ವಾದಿಸಿದರು.  15 ದಿನಗಳವರೆಗೆ ಪೊಲೀಸ್‌ ವಶಕ್ಕೆ ನೀಡುವಂತೆ ಪ್ರಾಸಿಕ್ಯೂಟರ್‌ ಒತ್ತಾಯಿಸಿದರು.  ಝಾ ಅವರನ್ನು ಏಳು ದಿನಗಳವರೆಗೆ ಪೊಲೀಸರ ವಶಕ್ಕೆ ಒಪ್ಪಿಸಲು ಕೋರ್ಟ್‌ ಆದೇಶಿಸಿತು.

ADVERTISEMENT

ಗುರುವಾರ ರಾತ್ರಿ ಇಲ್ಲಿನ ಕರ್ತವ್ಯ ಪಥ ಪೊಲೀಸ್‌ಠಾಣೆಯಲ್ಲಿ ಲಲಿತ್‌ ಝಾ ಶರಣಾಗಾಗಿದ್ದರು. ಇವರೊಂದಿಗಿದ್ದ ಮಹೇಶ್‌ ಕುಮಾವತ್‌ ಎಂಬುವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದರು. ರಾಜಸ್ಥಾನದಲ್ಲಿ ಝಾ ಅಡಗಿಕೊಳ್ಳಲು ಇವರು ನೆರವಾಗಿದ್ದರು.

ಝಾ ಬಿಹಾರ ಮೂಲದವರು. ಇವರು ಬಳಸುತ್ತಿದ್ದ ಫೋನ್‌ ಅನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಅದರ ಪತ್ತೆಗೆ  ವಿಚಾರಣೆ ನಡೆಸಬೇಕಿದೆ. ಸಾಗರ್‌, ಮನೋರಂಜನ್‌, ನೀಲಂ ಮತ್ತು ಅಮೋಲ್‌ ಅವರಿಂದ ಪಡೆದಿದ್ದ ನಾಲ್ಕು ಮೊಬೈಲ್‌ ಫೋನ್‌ಗಳನ್ನು ನಾಶ ಮಾಡಿದ್ದಾಗಿ ಝಾ ಹೇಳಿದ್ದಾರೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

‘ಇಡೀ ಸಂಚನ್ನು ಹೇಗೆ ರೂಪಿಸಲಾಯಿತು ಎಂಬುದನ್ನು ಅವರು ಹೇಳಿದ್ದಾರೆ. ಇದರ ಕಾರ್ಯಾಚರಣೆಯ ವಿಧಾನದ ಬಗ್ಗೆ ಪತ್ತೆ ಹಚ್ಚಲು  ಇನ್ನಷ್ಟು ವಿಚಾರಣೆಗೊಳಪಡಿಸುವ ಅಗತ್ಯವಿದೆ’ ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಹೇಳಿದರು.

ಸಂಸತ್ತಿನಲ್ಲಿ ಭದ್ರತೆ ಉಲ್ಲಂಘಿಸುವ ಯೋಜನೆಗಾಗಿ ಆರೋಪಿಗಳು ಹಲವು ಬಾರಿ ಭೇಟಿಯಾಗಿರುವುದಾಗಿ ಝಾ ತಿಳಿಸಿರುವುದಾಗಿ ಪೊಲೀಸರು ಹೇಳಿದರು.

ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಮೂಲಕ ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ಒತ್ತಡ ಹಾಕಲು ಬಯಸಿದ್ದರು. ಸಾಕ್ಷ್ಯಗಳ ನಾಶಕ್ಕಾಗಿ  ಸಹಚರರ ಫೋನ್‌ಗಳನ್ನು ಪಡೆದುಕೊಂಡಿದ್ದು ಬಹು ದೊಡ್ಡ ಸಂಚಿನ ಭಾಗವೇ ಆಗಿದೆ.  ಜೈಪುರದಿಂದ ದೆಹಲಿಗೆ ತೆರಳುವ ಮಾರ್ಗ ಮಧ್ಯೆ ತನ್ನ ಫೋನನ್ನು ಎಸೆದಿದ್ದಾರೆ ಎಂದು ಪ್ರಾಸಿಕ್ಯೂಟರ್‌ ಅವರು ಕೋರ್ಟ್‌ಗೆ ವಿವರಿಸಿದರು.

ಆರೋಪಿಗಳನ್ನು ಪರಸ್ಪರ ಮುಖಾಮುಖಿಯಾಗಿಸಲು, ಮೊಬೈಲ್‌ ಫೋನ್‌ಗಳನ್ನು ಪತ್ತೆ ಮಾಡಲು, ನಾಲ್ಕು ದಿನಗಳ ಹಿಂದೆ ಅವರು ತಂಗಿದ್ದ ಹೋಟೆಲ್‌ಗೆ ಕರೆದೊಯ್ಯಲು ಮತ್ತು ಅವರ ಹಣಕಾಸು ವ್ಯವಹಾರ ಹಾಗೂ ದಾಳಿ ನಡೆಸಲು ಯಾರಾದರೂ ಹಣ ನೀಡಿದ್ದಾರಾ ಎಂಬುದನ್ನು ವಿಚಾರಿಸಲು ಪೊಲೀಸರು ಬಯಸಿದ್ದಾರೆ ಎಂದರು.

ಘಟನೆಗೆ ಯಾವುದಾದರೂ ಹೊರ ದೇಶದ ಅಥವಾ ವಿದೇಶಿ ಶಕ್ತಿಗಳ ಕೈವಾಡ ಇದೆಯಾ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಝಾ ಅವರು ಬುಧವಾರ ರಾತ್ರಿ ರಾಜಸ್ಥಾನ ತಲುಪಿದ್ದು ಮಹೇಶ್‌ ಅವರನ್ನು ಭೇಟಿ ಮಾಡಿದ್ದಾರೆ. ಮಹೇಶ್‌ ಮತ್ತು ಅವರ ಸೋದರ ಸಂಬಂಧಿ ಕೈಲಾಸ್‌ ಅವರು ಇವರಿಗೆ ರೂಮಿನ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಝಾ ಪೊಲೀಸರ ಮುಂದೆ ಶರಣಾಗುತ್ತಾರೆ ಎಂದು ಗುರುವಾರ ಕೈಲಾಸ್‌ಗೆ ತಿಳಿಸಲಾಗಿದೆ.

ವಿಚಾರಣೆಗೆ ಒಳಗಾಗಿರುವ ಮಹೇಶ್‌, ಸಂಸತ್ತಿನ ಭದ್ರತೆ ಉಲ್ಲಂಘಿಸಿದ ತಂಡದ ಜತೆ ಇರಬೇಕಿತ್ತು. ಆದರೆ ಆತ ಅಂದು ಸ್ಥಳಕ್ಕೆ ಬರಲು ಸಾಧ್ಯವಾಗಿರಲಿಲ್ಲ ಎಂದು ಮೂಲಗಳು ಹೇಳಿವೆ.

ಪೊಲೀಸರ ಪ್ರಕಾರ, ಭಗತ್‌ಸಿಂಗ್‌, ಚಂದ್ರಶೇಖರ್‌ ಆಜಾದ್‌ ಮತ್ತು ಸುಭಾಷ್‌ ಚಂದ್ರ ಬೋಸ್‌ ಅವರಂತಹ ಕ್ರಾಂತಿಕಾರಿಗಳ ಹಲವು ಚಿತ್ರಗಳು ಮತ್ತು ಕೋಟ್‌ಗಳನ್ನು ಝಾ ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದರು.

ಸಾಗರ್‌ ಶರ್ಮಾ ಮತ್ತು ಮನೋರಂಜನ್‌ ಅವರು ಬುಧವಾರ ಲೋಕಸಭೆಯಲ್ಲಿ ಸಂದರ್ಶಕರ ಗ್ಯಾಲರಿಯಿಂದ ಸಂಸದರು ಕುಳಿತುಕೊಳ್ಳುವ ಆಸನಗಳತ್ತ ಜಿಗಿದು ಸ್ಮೋಕ್‌ ಕ್ಯಾನ್‌ (ಅನಿಲ ಉಗುಳುವ ಡಬ್ಬಿ) ಪ್ರಯೋಗಿಸಿದ್ದರು. ಇದೇ ವೇಳೆ ಸಂಸತ್ತಿನ ಹೊರಗೆ ಇತರ ಇಬ್ಬರು– ಅಮೋಲ್‌ ಶಿಂದೆ ಮತ್ತು ನೀಲಂ ದೇವಿ ಅವರು ಬಣ್ಣದ ಹೊಗೆ ಸಿಂಪಡಿಸಿ ಪ್ರತಿಭಟನೆ ನಡೆಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.