ನವದೆಹಲಿ: ಕಾಂಗ್ರೆಸ್ ಸೇರಿದಂತೆ 22 ವಿರೋಧ ಪಕ್ಷಗಳ ಬಹಿಷ್ಕಾರ, ಮಹಿಳಾ ಕುಸ್ತಿಪಟುಗಳನ್ನು ಪೊಲೀಸರು ವಶಕ್ಕೆ ಪಡೆಯುವಾಗ ನಡೆದ ಗದ್ದಲ, ತಳ್ಳಾಟದ ಬೆಳವಣಿಗೆಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನೂತನ ಸಂಸತ್ ಭವನದ ಉದ್ಘಾಟನೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು.
ಸಮಾರಂಭವನ್ನು ಎರಡು ಭಾಗಗಳಲ್ಲಿ ಆಯೋಜಿಸಲಾಗಿತ್ತು. ಒಂದು ನೂತನ ಸಂಸತ್ ಭವನದ ಉದ್ಘಾಟನೆ. ಎರಡನೇಯದು ಹಿಂದುತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್ ಅವರ ಜಯಂತಿ ಕಾರ್ಯಕ್ರಮ.
ಪ್ರಧಾನಿ ಮೋದಿ ಅವರು ನೂತನ ಸಂಸತ್ ಭವನಕ್ಕೆ ಬೆಳಿಗ್ಗೆ 7.30ರ ಸುಮಾರಿಗೆ ಬಂದರು. ನಂತರ ಧಾರ್ಮಿಕ ಕಾರ್ಯಕ್ರಮಗಳು ಒಂದರ ನಂತರ ಒಂದರಂತೆ ಜರುಗಿದವು.
ಪ್ರಧಾನಿ ಮೋದಿ ಅವರು ‘ಗಣಪತಿ ಹೋಮ’ವನ್ನು ಮೊದಲಿಗೆ ನೆರವೇರಿಸಿದರು. ಕರ್ನಾಟಕದ ಶೃಂಗೇರಿ ಮಠದ ವೈದಿಕರು ಹೋಮವನ್ನು ನಡೆಸಿಕೊಟ್ಟರು. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರೂ ಪ್ರಧಾನಿ ಅವರೊಂದಿಗೆ ಈ ಎಲ್ಲ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಂಸತ್ ಭವನದ ಎದುರು ಇರುವ ಮಹಾತ್ಮ ಗಾಂಧಿ ಅವರ ಪ್ರತಿಮೆಯ ಎದುರಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಇದಾದ ಬಳಿಕ, ತಮಿಳುನಾಡಿನ ಅಧೀನಮ್ ಮಠದ ಯತಿಗಳ ಸಮೂಹದೊಂದಿಗೆ ಪ್ರಧಾನಿ ಅವರು ಐತಿಹಾಸಿಕ ಮಹತ್ವದ್ದು ಎಂದು ಹೇಳಲಾದ ‘ಸೆಂಗೋಲ್’ ಅನ್ನು ನೂತನ ಸಂಸತ್ ಭವನದ ಒಳಗೆ ಮೆರವಣಿಗೆ ಮೂಲಕ ಕೊಂಡೊಯ್ದರು. ಈ ವೇಳೆ ‘ನಾದಸ್ವರ’ ಹಾಗೂ ಮಂತ್ರ ಘೋಷಗಳನ್ನು ಉಚ್ಚರಿಸಲಾಯಿತು. ಸ್ಪೀಕರ್ ಪೀಠದ ಬಲ ಬದಿಯಲ್ಲಿ ‘ಸೆಂಗೋಲ್’ ಅನ್ನು ಪ್ರತಿಷ್ಠಾಪಿಸಲಾಯಿತು.
ಸಮಾರಂಭದಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳನ್ನು ನೋಡಿದರೆ ದೇಶವನ್ನು ಹಲವು ಶತಮಾನಗಳ ಹಿಂದಕ್ಕೆ ಒಯ್ಯುವಂತೆ ತೋರುತ್ತಿದೆ. ವಿಜ್ಞಾನದ ಕುರಿತು ಯಾವುದೇ ರಾಜಿ ಸಲ್ಲ. ಸಮಾಜವನ್ನು ವೈಜ್ಞಾನಿಕ ಮನೋಭಾವದೊಂದಿಗೆ ನಿರ್ಮಿಸುವ ಕುರಿತು ನೆಹರೂ ಅವರು ಶ್ರಮಪಟ್ಟಿದ್ದರು. ಆದರೆ ಈಗ ಆಗುತ್ತಿರುವುದು ಇದಕ್ಕೆ ವಿರುದ್ಧವಾದುದು .ಶರದ್ ಪವಾರ್, ಎನ್‌ಸಿಪಿ ಮುಖ್ಯಸ್ಥ
ಜೈನ, ಮುಸ್ಲಿಂ, ಬೌದ್ಧ, ಸಿಖ್ ಸೇರಿದಂತೆ ಸರ್ವಧರ್ಮ ಪ್ರಾರ್ಥನೆ ನಡೆಯಿತು. ನೂತನ ಸಂಸತ್ ಭವನದ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದ ಕಾರ್ಮಿಕ ಸಮೂಹವನ್ನು ಪ್ರಧಾನಿ ಮೋದಿ ಅವರು ಸನ್ಮಾನಿಸಿದರು.
ಪ್ರತಿ ದೇಶದ ಇತಿಹಾಸದಲ್ಲೂ ಕೆಲವೇ ಘಟನೆಗಳು ಅಮರವಾಗುತ್ತವೆ. ಕೆಲವು ದಿನಾಂಕಗಳು ‘ಅಮರತ್ವದ ಚಿಹ್ನೆ’ಗಳಾಗುತ್ತವೆ. 2023ರ ಮೇ 28 ಕೂಡ ಇಂತಹದೇ ದಿನವಾಗಿದೆ ನರೇಂದ್ರ ಮೋದಿ ಪ್ರಧಾನಿ ರಾಷ್ಟ್ರಪತಿಯಿಂದ ಉದ್ಘಾಟನೆಯ ಹಕ್ಕನ್ನು ಕಿತ್ತುಕೊಳ್ಳಲಾಯಿತು. ಮಹಿಳಾ ಕುಸ್ತಿಪಟುಗಳಿಗೆ ಸರ್ವಾಧಿಕಾರಿ ಧೋರಣೆಯೊಂದಿಗೆ ರಸ್ತೆಯಲ್ಲಿ ಹೊಡೆಯಲಾಯಿತು. ಅಲ್ಲಿಗೆ ಪ್ರಜಾಪ್ರಭುತ್ವ ರಾಷ್ಟ್ರೀಯತೆ ಹೆಣ್ಣುಮಕ್ಕಳನ್ನು ಉಳಿಸಿ ಎಂಬ ಬಿಜೆಪಿ–ಆರ್‌ಎಸ್‌ಎಸ್‌ನ ಮೂರು ಸುಳ್ಳು ಸಿದ್ಧಾಂತಗಳು ದೇಶದೆದುರು ನಗ್ನವಾದವುಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಶಿಷ್ಟಾಚಾರದ ಕಾರಣಗಳಿಂದಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ನೂತನ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಆದರೆ, ಇಬ್ಬರೂ ತಮ್ಮ ಸಂದೇಶಗಳನ್ನು ಕಳುಹಿಸಿದ್ದರು. ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್ ಅವರು ಇಬ್ಬರ ಸಂದೇಶಗಳನ್ನು ಓದಿದರು. ನರೇಂದ್ರ ಮೋದಿ ಅವರು ಮಧ್ಯಾಹ್ನದ ವೇಳೆಗೆ ಭಾಷಣ ಮಾಡಿದರು.
‘ಅಭಿವೃದ್ಧಿಶೀಲ ಭಾರತ’ಕ್ಕೆ ನಾಂದಿ
ಮೋದಿ ‘ಹೊಸ ಸಂಸತ್ ಭವನವು ಗುಲಾಮಗಿರಿ ಮನಃಸ್ಥಿತಿಯನ್ನು ಹಿಂದೆಬಿಟ್ಟು ‘ಅಭಿವೃದ್ಧಿಶೀಲ ಭಾರತ’ಕ್ಕೆ ನಾಂದಿ ಹಾಡಿದೆ. ನವ ಭಾರತದ ಆಶೋತ್ತರಗಳ ಪ್ರತಿಬಿಂಬವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
‘ಇತರ ದೇಶಗಳನ್ನು ಅಭಿವೃದ್ಧಿಶೀಲವಾಗಿಸಲು ಈ ‘ಅಭಿವೃದ್ಧಿಶೀಲ ಭಾರತ’ವು ಸಹಕಾರಿಯಾಗಲಿದೆ’ ಎಂದೂ ಹೇಳಿದರು.
‘ಸೆಂಗೋಲ್’ ಅನ್ನು ಪ್ರತಿಷ್ಠಾಪಿಸುವ ವೇಳೆ ಮೋದಿ ಅವರು ಗಣರಾಜ್ಯದ ಅಡಿಪಾಯವನ್ನೇ ಮರೆತರು. ಸಂವಿಧಾನದ ಶಿಲ್ಪಿಯಾದ ಅಂಬೇಡ್ಕರ್ ಅವರ ಹೆಸರನ್ನು ಮೋದಿ ಎಲ್ಲೂ ಪ್ರಸ್ತಾಪಿಸಲಿಲ್ಲಡಿ. ರಾಜ ಸಿಪಿಐ
‘ಭಾರತವು ಈಗ ತನ್ನ ಪ್ರಗತಿಯ ಪ್ರಯಾಣವನ್ನು ಆರಂಭಿಸಿದೆ. ನಮ್ಮ ಪರಂಪರೆಯನ್ನು ಉಳಿಸಿಕೊಂಡೇ ಅಭಿವೃದ್ಧಿಯ ಹೊಸ ಆಯಾಮದೊಂದಿಗೆ ‘ಅಮೃತಕಾಲ’ವು ಮುನ್ನುಗ್ಗುತ್ತಿದೆ. ಈ ಕಾಲವು ದೇಶಕ್ಕೆ ಹೊಸ ದಿಕ್ಕನ್ನು ನೀಡಿದೆ. ಈ ಕಾಲವೇ ಜನರ ಆಶೋತ್ತರಗಳನ್ನು ಆಗುಮಾಡುತ್ತಿದೆ’ ಎಂದರು.
‘ಭಾರತವು ಪ್ರಜಾಪ್ರಭುತ್ವದ ದೇಶ ಮಾತ್ರವಲ್ಲ. ಅದು ಪ್ರಜಾಪ್ರಭುತ್ವದ ತಾಯಿ ಕೂಡ. ನಮ್ಮ ‘ಅಭಿವೃದ್ಧಿಶೀಲ ಭಾರತ’ದ ಕನಸು ನನಸಾಗುವುದನ್ನು ಈ ನೂತನ ಭವನ ನೋಡಲಿದೆ. ನಮ್ಮ ಪ್ರಜಾಪ್ರಭುತ್ವವು ನಮ್ಮ ಸ್ಫೂರ್ತಿ ನಮ್ಮ ಸಂವಿಧಾನವು ನಮ್ಮ ಪರಿಹಾರ; ಸ್ಫೂರ್ತಿ ಮತ್ತು ಪರಿಹಾರ ಎರಡನ್ನೂ ಪ್ರತಿನಿಧಿಸುವುದು ಸಂಸತ್ತು’ ಎಂದು ಹೇಳಿದರು.
ರಾಷ್ಟ್ರಪತಿ ಉಪರಾಷ್ಟ್ರಪತಿ ಮತ್ತು ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲಿ ‘ನವ ಭಾರತ’ದ ಘೋಷಣೆ ಮಾಡಲಾಗಿದೆ. ಭಾರತ ಅಂದರೆ ದೇಶ ಮತ್ತು ನಾಗರಿಕರು; ನವ ಭಾರತ ಎಂದರೆ ರಾಜ ಮತ್ತು ಪ್ರಜೆಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ
‘ಪ್ರಜಾಸತ್ತಾತ್ಮಕ ಸಭೆ ಮತ್ತು ಸಮಿತಿಗಳ ತತ್ವಗಳನ್ನು ವೇದಗಳು ಭೋದಿಸುತ್ತವೆ. ಗಣರಾಜ್ಯದ ವಿವರಣೆಯನ್ನು ನಾವು ಮಹಾಭಾರತದಲ್ಲಿ ಕಾಣಬಹುದು. ಭಾರತವು ವೈಶಾಲಿಯ (ಮಹಾವೀರ ಜನಿಸಿದ ಸ್ಥಳ) ಪ್ರಜಾಪ್ರಭುತ್ವವನ್ನು ಜೀವಿಸಿದೆ. ಬಸವಣ್ಣ ಅವರ ಅನುಭವ ಮಂಟಪವು ನಮಗೆಲ್ಲರಿಗೂ ಗರ್ವದ ವಿಷಯವಾಗಿದೆ’ ಎಂದರು. ‘ಈ ಕಟ್ಟಡಕ್ಕೆ ದೊಡ್ಡ ಪರಂಪರೆ ಇದೆ. ಇಲ್ಲಿ ವಾಸ್ತು ಇದೆ. ಕಲೆ ಇದೆ. ಸಂಸ್ಕೃತಿ ಇದೆ. ಈ ಎಲ್ಲದರ ಜೊತೆಗೆ ಸಂವಿಧಾನವಿದೆ’ ಎಂದರು.
‘ನನ್ನನ್ನು ನಾನೇ ಪ್ರೀತಿಸುವ ದಿನ’ವನ್ನು ಮೋದಿ ಅವರು ಆಚರಿಸಿಕೊಂಡಿದ್ದಾರೆ. ಕಳೆದ ಒಂಬತ್ತು ವರ್ಷಗಳಲ್ಲಿ ಮೋದಿ ಹಾಗೂ ಅವರ ಸರ್ಕಾರವು ಸಂಸತ್ತನ್ನು ಹೇಗೆಲ್ಲಾ ಅವಮಾನಿಸಿದೆ ಲೇವಡಿ ಮಾಡಿದೆ ಎನ್ನುವುದನ್ನು ನೆನಪಿಸಬೇಕು.ಡೆರೆಕ್ ಒಬ್ಯಾನ್, ಟಿಎಂಸಿ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.