ADVERTISEMENT

ಅದಾನಿಯನ್ನು ಈಗಲೇ ಬಂಧಿಸಿ, ಸೆಬಿ ಮುಖ್ಯಸ್ಥರನ್ನು ತನಿಖೆಗೊಳಪಡಿಸಿ: ರಾಹುಲ್ ಗಾಂಧಿ

ಪಿಟಿಐ
Published 21 ನವೆಂಬರ್ 2024, 8:32 IST
Last Updated 21 ನವೆಂಬರ್ 2024, 8:32 IST
<div class="paragraphs"><p>ಗೌತಮ್‌ ಅದಾನಿ,&nbsp;ರಾಹುಲ್ ಗಾಂಧಿ,&nbsp;ಮಾಧಬಿ ಪುರಿ ಬುಚ್‌</p></div>

ಗೌತಮ್‌ ಅದಾನಿ, ರಾಹುಲ್ ಗಾಂಧಿ, ಮಾಧಬಿ ಪುರಿ ಬುಚ್‌

   

ನವದೆಹಲಿ: ಉದ್ಯಮಿ ಗೌತಮ್‌ ಅದಾನಿ ಅವರ ವಿರುದ್ಧ ಅಮೆರಿಕದಲ್ಲಿ ಲಂಚ ಹಾಗೂ ವಂಚನೆ ಆರೋಪ ಕೇಳಿ ಬಂದಿದ್ದು, ಅವರನ್ನು ಕೂಡಲೇ ಬಂಧಿಸಬೇಕು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಆಗ್ರಹಿಸಿದ್ದಾರೆ.

ಸೌರ ವಿದ್ಯುತ್‌ ಗುತ್ತಿಗೆಗೆ ಸಂಬಂಧಿಸಿದಂತೆ ಭಾರತೀಯ ಅಧಿಕಾರಿಗಳಿಗೆ ಶತಕೋಟಿ ಡಾಲರ್‌ ಲಂಚ ನೀಡಿರುವುದು ಹಾಗೂ ವಂಚಿಸಿರುವ ಆರೋಪ ಅದಾನಿ ಗ್ರೀನ್ ಎನರ್ಜಿ ಕಂಪನಿಯ ಅಧ್ಯಕ್ಷ ಗೌತಮ್‌ ಅದಾನಿ ಅವರ ಮೇಲಿದೆ. ಈ ಸಂಬಂಧ ಅದಾನಿ ಸೇರಿದಂತೆ ಹಲವರ ವಿರುದ್ಧ ಅಮೆರಿಕದ ಪ್ರಾಸಿಕ್ಯೂಟರ್‌ ಕ್ರಿಮಿನಲ್ ಆರೋಪಪಟ್ಟಿ ಸಲ್ಲಿಸಿದ್ದಾರೆ.

ADVERTISEMENT

ಇದರ ಬೆನ್ನಲ್ಲೇ, ಅಮೆರಿಕದ ನ್ಯಾಯಾಲಯ ಅದಾನಿ ಹಾಗೂ ಅವರ ಸೋದರಳಿಯ ಸಾಗರ್‌ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದೆ. 

ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ಉದ್ಯಮಿಯು ಭಾರತ ಹಾಗೂ ಅಮೆರಿಕದ ಕಾನೂನುಗಳನ್ನು ಉಲ್ಲಂಘಿಸಿರುವುದು ಇದೀಗ ಸ್ಪಷ್ಟವಾಗಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಜಾರ್ಖಂಡ್‌ ಹಾಗು ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನೀಡಿದ್ದ 'ಒಂದಾಗಿದ್ದರೆ ಸುರಕ್ಷಿತರಾಗಿರುತ್ತೀರಿ' ಎಂಬ ಹೇಳಿಕೆಯನ್ನು ಉಲ್ಲೇಖಿಸಿರುವ ರಾಹುಲ್‌, ಪ್ರಧಾನಿ ಹಾಗೂ ಉದ್ಯಮಿಯ ಕಾಲೆಳೆದಿದ್ದಾರೆ.

ಅದಾನಿ ಅವರನ್ನು ತಕ್ಷಣವೇ ಬಂಧಿಸಿ ವಿಚಾರಣೆಗೊಳಪಡಿಸಬೇಕು. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷೆ ಹಾಗೂ ಅದಾನಿಯನ್ನು ರಕ್ಷಿಸುತ್ತಿರುವ ಮಾಧಬಿ ಪುರಿ ಬುಚ್‌ ಅವರನ್ನು ಸ್ಥಾನದಿಂದ ವಜಾಗೊಳಿಸಿ, ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

'ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸಬೇಕು' ಎಂದೂ ಹೇಳಿರುವ ರಾಹುಲ್‌, ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅದಾನಿ ವಿಚಾರ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.

'ಮೋದಿ ಸರ್ಕಾರವು ಅದಾನಿ ಅವರನ್ನು ರಕ್ಷಿಸುತ್ತಿದೆ. ಹಾಗಾಗಿ, ಅವರನ್ನು ಭಾರತದಲ್ಲಿ ಬಂಧಿಸುವುದೂ ಇಲ್ಲ, ತನಿಖೆ ನಡೆಸುವುದೂ ಇಲ್ಲ ಎಂಬ ಖಾತ್ರಿ ಇದೆ' ಎಂದು ಕುಟುಕಿದ್ದಾರೆ.

ಯಾವುದೇ ಪಕ್ಷ ಅಧಿಕಾರಲ್ಲಿ ಇದ್ದರೂ ಸರಿ, ಅದಾನಿ ಸಮೂಹಕ್ಕೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳಲ್ಲಿಯೂ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಆರೋಪಗಳಿಗೆ ಸಂಬಂಧಿಸಿದಂತೆ 'ಅದಾನಿ ಸಮೂಹ' ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮಾಧವಿ ವಿರುದ್ಧ ಹಿಂಡೆನ್‌ಬರ್ಗ್ ಆರೋಪ
ಅದಾನಿ ಸಮೂಹದ ಸಾಗರೋತ್ತರ ಹೂಡಿಕೆಯಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಮತ್ತು ಅವರ ಪತಿ ಪಾಲುದಾರಿಕೆ ಹೊಂದಿದ್ದಾರೆ ಎಂದು ಅಮೆರಿಕದ ಶಾರ್ಟ್‌ ಶೆಲ್ಲರ್‌ ಕಂಪನಿ 'ಹಿಂಡೆನ್‌ಬರ್ಗ್' ಆರೋಪಿಸಿತ್ತು. ಅದಾನಿಯವರು ಮಾರಿಷಸ್‌ ಮತ್ತು ಇನ್ನಿತರ ದೇಶಗಳಲ್ಲಿ ಹೊಂದಿರುವ 'ಶೆಲ್‌ ಕಂಪನಿ'ಗಳ ಬಗ್ಗೆ ತನಿಖೆ ನಡೆಸಲು ಸೆಬಿ ಯಾವುದೇ ಆಸಕ್ತಿ ತೋರದಿರುವುದು ಅಚ್ಚರಿ ಮೂಡಿಸಿದೆ ಎಂದೂ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.