ನವದೆಹಲಿ: ರಾಜ್ಯಸಭೆಯು ಮೂರೂವರೆ ತಾಸಿನಲ್ಲಿ ಏಳು ಮಸೂದೆಗಳಿಗೆ ಮಂಗಳವಾರ ಅಂಗೀಕಾರ ನೀಡಿದೆ.
ಎಂಟು ಸದಸ್ಯರನ್ನು ಅಮಾನತು ಮಾಡಿದ್ದನ್ನು ಖಂಡಿಸಿ ವಿರೋಧ ಪಕ್ಷಗಳು ಕಲಾಪ ಬಹಿಷ್ಕರಿಸಿದ ಬಳಿಕ ಈ ಮಸೂದೆಗಳಿಗೆ ಒಪ್ಪಿಗೆ ದೊರೆತಿದೆ. ಒಪ್ಪಿಗೆ ದೊರೆತವುಗಳಲ್ಲಿ ಎರಡು ವಿವಾದಾತ್ಮಕ ಮಸೂದೆಗಳೂ ಸೇರಿವೆ.
ಟಿಡಿಪಿಯ ಕನಕಮೇದಲ ರವೀಂದ್ರ ರೆಡ್ಡಿ ಅವರು ಎಲ್ಲ ಮಸೂದೆಗಳ ಬಗ್ಗೆ ಮಾತನಾಡಿದರು. ವೈಎಸ್‌ಆರ್ ಕಾಂಗ್ರೆಸ್‌ನ ವಿಜಯಸಾಯಿ ರೆಡ್ಡಿ 6 ಮತ್ತು ಜೆಡಿಯುನ ಆರ್.ಸಿ.ಪಿ. ಸಿಂಗ್ ಅವರು ಐದು ಮಸೂದೆಗಳ ಬಗ್ಗೆ ಭಾಷಣ ಮಾಡಿದರು.
1) ಐಐಐಟಿಗಳನ್ನು ರಾಷ್ಟ್ರೀಯ ಮಹತ್ವದ ಸಂಸ್ಥೆಗಳು ಎಂದು ಘೋಷಿಸುವ ಮಸೂದೆ
ರಾಜ್ಯದ ರಾಯಚೂರಿನದ್ದು ಸೇರಿ ದೇಶದಲ್ಲಿ ಹೊಸದಾಗಿ ಆರಂಭವಾಗಿರುವ 5 ಐಐಐಟಿ (ಇಂಡಿಯನ್ ಇನ್ಸ್‌ಟಿಟ್ಯೂಟ್ ಆಪ್ ಇನ್‌ಫರ್ಮೇಷನ್ ಟೆಕ್ನಾಲಜಿ)ಗಳನ್ನು ರಾಷ್ಟ್ರೀಯ ಮಹತ್ವದ ಸಂಸ್ಥೆಗಳು ಎಂದು ಘೋಷಿಸುವ ಮಸೂದೆ ಇದಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ಈ ಐಐಐಟಿಗಳನ್ನು ಸ್ಥಾಪನೆ ಮಾಡಲಾಗಿದೆ. ಇತರೆ ಐಐಟಿ ಸಂಸ್ಥೆಗಳಲ್ಲಿ ಇರುವಂತೆ ಎಂಟೆಕ್, ಬಿಟೆಕ್ ಹಾಗೂ ಪಿಎಚ್‌ಡಿ ಪದವಿಗೂ ಅವಕಾಶ ನೀಡುವುದು ಮಸೂದೆಯ ಪ್ರಮುಖ ಉದ್ದೇಶವಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಬಲಗೊಳಿಸುವುದು, ವಿದೇಶಿ ವಿದ್ಯಾರ್ಥಿಗಳನ್ನು ಆಕರ್ಷಿಸುವುದು ಈ ಮಸೂದೆಯಲ್ಲಿ ಸೇರಿದೆ.
2) ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆ
ಕಾಳು, ಬೇಳೆ, ಎಣ್ಣೆ ಬೀಜ, ಖಾದ್ಯ ತೈಲ, ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಅಗತ್ಯವಸ್ತುಗಳ ಪಟ್ಟಿಯಿಂದ ಹೊರಗೆ ಇರಿಸುವುದು ಮತ್ತು ಈ ವಸ್ತುಗಳ ಮೇಲಿನ ಸಂಗ್ರಹ ಮಿತಿಯನ್ನು ಕೈಬಿಡುವುದು ಈ ಮಸೂದೆಯ ಉದ್ದೇಶ. ಹೂಡಿಕೆದಾರರ ಹಸ್ತಕ್ಷೇಪ ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ರೈತರು ಮತ್ತು ಗ್ರಾಹಕರ ಹಿತ ಕಾಪಾಡುವುದು ಈ ಮಸೂದೆಯ ಉದ್ದೇಶ.
3) ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಕಾಯ್ದೆ
ಸಹಕಾರ ಬ್ಯಾಂಕುಗಳ ಮೇಲ್ವಿಚಾರಣೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಒಪ್ಪಿಸುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ. ಸಹಕಾರಿ ಬ್ಯಾಂಕ್ ಗಳ ವೃತ್ತಿಪರತೆಯನ್ನು ಹೆಚ್ಚಿಸುವುದು, ಬಂಡವಾಳ ಒಳ ಹರಿವಿಗೆ ಆದ್ಯತೆ, ಆಡಳಿತ ಸುಧಾರಣೆ ಮತ್ತು ಠೇವಣಿದಾರರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ರಕ್ಷಿಸಲು ತಿದ್ದುಪಡಿಗಳನ್ನು ಮಾಡಲಾಗಿದೆ.
4) ಕಂಪನಿಗಳ (ತಿದ್ದುಪಡಿ) ಕಾಯ್ದೆ
2013ರ ಕಂಪನಿಗಳ ಅಧಿನಿಯಮದ ಸೆಕ್ಷನ್ 48ಕ್ಕೆ ತಿದ್ದುಪಡಿ ಮಾಡಲಾಗಿದೆ. ಕಂಪನಿಗಳಲ್ಲಿ ನಡೆಯುವ ಅಪರಾಧ ಹಾಗೂ ಜನರನ್ನು ವಂಚಿಸಿ ಪಲಾಯನ ಮಾಡುವ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಲು ಈ ತಿದ್ದುಪಡಿ ಮಸೂದೆ ಅಗತ್ಯವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
5) ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಮಸೂದೆ
ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಮಸೂದೆ 2020 ಅನ್ನು ರಾಜ್ಯಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಯಿತು. ಹಲವು ವಿಧಿವಿಜ್ಞಾನ ವಿಶ್ವವಿದ್ಯಾಲಯಗಳನ್ನು ಒಟ್ಟುಗೂಡಿಸಿ ಒಂದೇ ಹೆಸರಿನಲ್ಲಿ ಸ್ಥಾಪಿಸುವ ಶವನ್ನು ಹೊಂದಿದೆ. ಗುಜರಾತ್ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ, ಜಯಪ್ರಕಾಶ್ ನಾರಾಯಣ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಕ್ರಿಮಿನಾಲಜಿ, ಮತ್ತು ದೆಹಲಿಯ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯವನ್ನು ಒಂದೇ ಹೆಸರಿನಲ್ಲಿ ಸ್ಥಾಪಿಸಲಾಗುವುದು. ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗಳಿಗೂ ಅವಕಾಶ ಕಲ್ಪಿಸಲಾಗಿದೆ.
6) ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಮಸೂದೆ
ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಮಸೂದೆಯು ಗುಜರಾತ್ ನಲ್ಲಿ ರಕ್ಷಾ ಶಕ್ತಿ ವಿಶ್ವವಿದ್ಯಾಲಯವನ್ನು ಮೇಲ್ದರ್ಜೆಗೇರಿಸುವ ಉದ್ದೇಶವನ್ನು ಹೊಂದಿದೆ. ಇದನ್ನು ರಾಷ್ಟ್ರೀಯ ಸಂಸ್ಥೆಯಾಗಿ ಮಾರ್ಪಡಿಸಿ ಮಿಲಿಟರಿ ಕೇತ್ರದಲ್ಲಿ ಸಂಶೋಧನೆಯನ್ನು ಹೆಚ್ಚಿಸುವುದು ಹಾಗೂ ಮಿಲಿಟರಿ ಶಿಕ್ಷಣಕ್ಕೆ ಆದ್ಯತೆ ನೀಡುವುದು ಈ ಮಸೂದೆಯ ಉದ್ದೇಶ.
7) ತೆರಿಗೆ ಮತ್ತು ಇತರ ಕಾನೂನುಗಳು (ವಿನಾಯಿತಿ ಮತ್ತು ಕೆಲವು ಅಂಶಗಳ ತಿದ್ದುಪಡಿ) ಮಸೂದೆ
ದೇಶ ವ್ಯಾಪಿಯಾಗಿ ತೆರಿಗೆ ಪಾವತಿಯನ್ನು ಸರಳೀಕರಿಸುವುದಕ್ಕೆ ಕಾಯ್ದೆಯಲ್ಲಿ ಹಲವು ತಿದ್ದಪಡಿಗಳನ್ನು ಮಾಡಲಾಗಿದೆ. ಹಾಗೇ ತೆರಿಗೆ ಕಳ್ಳರನ್ನು ಪತ್ತೆ ಹಚ್ಚುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ. (ಈ ಮಸೂದೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.