ನವದೆಹಲಿ: ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಕಾಡು ಕುರುಬರ ಜತೆಗೆ ಬೆಟ್ಟ ಕುರುಬರನ್ನು ಸೇರಿಸುವ ಮಸೂದೆಯನ್ನು ಸಂಸತ್ ಗುರುವಾರ ಅಂಗೀಕರಿಸಿದೆ.
ರಾಜ್ಯಸಭೆಯು ಸಂವಿಧಾನ (ಪರಿಶಿಷ್ಟ ಪಂಗಡ) ಆದೇಶ (ನಾಲ್ಕನೇ ತಿದ್ದುಪಡಿ) ಮಸೂದೆ 2022 ಅನ್ನು ಗುರುವಾರ ಧ್ವನಿಮತದ ಮೂಲಕ ಅಂಗೀಕರಿಸಿತು. ಈ ಮಸೂದೆಗೆ ಲೋಕಸಭೆಯಲ್ಲಿ ಡಿಸೆಂಬರ್ 19ರಂದು ಅಂಗೀಕಾರ ನೀಡಲಾಗಿತ್ತು. ಬೆಟ್ಟ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಸಂಬಂಧ ಸಮುದಾಯದ ಜನರು 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದರು. ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಈ ಸಮುದಾಯದ ಜನರು ಇದ್ದಾರೆ.
ಮೇಲ್ಮನೆಯಲ್ಲಿ ಮಸೂದೆ ಮಂಡಿಸಿದ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ, ‘ದಕ್ಷಿಣದ ರಾಜ್ಯದಲ್ಲಿ ಬೆಟ್ಟ ಕುರುಬರ ಸಂಖ್ಯೆ ಕೇವಲ 5 ಸಾವಿರ ಇದೆ. ಅವರಿಗೆ ನ್ಯಾಯ ಒದಗಿಸುವ ಉದ್ದೇಶವನ್ನು ಮಸೂದೆ ಹೊಂದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.