ನವದೆಹಲಿ: ರೈಲಿನಲ್ಲಿ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ನೀಡುತ್ತಿದ್ದ ರಿಯಾಯಿತಿಯನ್ನು ಕನಿಷ್ಠ ಸ್ಲೀಪರ್ ದರ್ಜೆ ಮತ್ತು ಎ.ಸಿ. ಮೂರನೇ ದರ್ಜೆಯಲ್ಲಾದರೂ ತುರ್ತಾಗಿ ಮರುಜಾರಿಗೊಳಿಸಬೇಕು ಎಂದು ರೈಲ್ವೆ ಸಂಸದೀಯ ಸ್ಥಾಯಿ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ರೈಲು ಸಂಚಾರ ಸಾಮಾನ್ಯ ಸ್ಥಿತಿಗೆ ಮರಳಿರುವ ಕಾರಣ ವಿವಿಧ ವಿಭಾಗಗಳ ಪ್ರಯಾಣಿಕರಿಗೆ ನೀಡುತ್ತಿದ್ದ ರಿಯಾಯಿತಿಯನ್ನು ವಿವೇಚನೆಯಿಂದ ಪರಿಗಣಿಸಬೇಕು ಎಂದು ಸಮಿತಿಯು ಸಂಸತ್‌ಗೆ ಗುರುವಾರ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ.
ಕೋವಿಡ್ ಪೂರ್ವದಲ್ಲಿ ಹಿರಿಯ ನಾಗರಿಕರಿಗೆ ನೀಡುತ್ತಿದ್ದ ರಿಯಾಯಿತಿಯನ್ನು ಪರಿಗಣಿಸುವುದರಿಂದ ದುರ್ಬಲ ಮತ್ತು ನಿಜವಾಗಿಯೂ ಅಗತ್ಯವಿರುವ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ ಎಂದಿದೆ.
ಎಲ್ಲಾ ವಿಭಾಗಗಳಲ್ಲಿ ನೀಡುತ್ತಿದ್ದ ರಿಯಾಯಿತಿಯನ್ನು ರೈಲ್ವೆಯು 2020 ಮಾರ್ಚ್ 20ರಂದು ಕೋವಿಡ್ ಕಾರಣಕ್ಕೆ ನಿಲ್ಲಿಸಿತ್ತು. ಆದರೆ, ಅಂಗವಿಕಲ ಪ್ರಯಾಣಿಕರಿಗೆ 4 ವಿಭಾಗಗಳಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಮತ್ತು ರೋಗಿಗಳಿಗೆ 11 ವಿಭಾಗಗಳಲ್ಲಿ ರಿಯಾಯಿತಿಯನ್ನು ಮರುಪರಿಚಯಿಸಿತ್ತು. ಕೋವಿಡ್ ಪೂರ್ವದಲ್ಲಿ ರೈಲ್ವೆಯು 53 ವಿಭಾಗಗಳಲ್ಲಿ ಪ್ರಯಾಣಿಕರಿಗೆ ರಿಯಾಯಿತಿ ನೀಡುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.