ನವದೆಹಲಿ: ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ವಿರೋಧ ಪಕ್ಷಗಳ 33 ಸಂಸದರನ್ನು ಲೋಕಸಭೆಯಿಂದ ಇಂದು (ಸೋಮವಾರ) ಅಮಾನತು ಮಾಡಲಾಗಿದೆ. ಇದರೊಂದಿಗೆ, ಸಂಸತ್ತಿನಲ್ಲಿ ಉಂಟಾದ ಭದ್ರತಾ ವೈಫಲ್ಯದ ವಿಚಾರವಾಗಿ ಪ್ರತಿಭಟಿಸಿದ್ದಕ್ಕಾಗಿ ಅಮಾನತುಗೊಂಡ ಸಂಸದರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಡಿಎಂಕೆ ಸಂಸದರಾದ ಟಿ.ಆರ್. ಬಾಲು, ದಯಾನಿಧಿ ಮಾರನ್, ತೃಣಮೂಲ ಕಾಂಗ್ರೆಸ್ ಸಂಸದ (ಟಿಎಂಸಿ) ಸೌಗತ ರಾಯ್ ಅವರು ಇಂದು (ಸೋಮವಾರ) ಅಮಾನತುಗೊಂಡವರ ಪಟ್ಟಿಯಲ್ಲಿದ್ದಾರೆ.
ಕಾಂಗ್ರೆಸ್ ಸಂಸದರಾದ ಕೆ.ಜಯಕುಮಾರ್, ವಿಜಯ್ ವಸಂತ್ ಮತ್ತು ಅಬ್ದುಲ್ ಖಲೇಖ್ ಅವರು ಸ್ಪೀಕರ್ ಪೀಠದ ಬಳಿಗೆ ತೆರಳಿ ಘೋಷಣೆಗಳನ್ನು ಕೂಗಿದ್ದರು. ಈ ಮೂವರನ್ನು ಹಕ್ಕು ಬಾಧ್ಯತಾ ಸಮಿತಿ ವರದಿ ಬರುವವರೆಗೆ ಹಾಗೂ ಉಳಿದ 30 ಸಂಸದರನ್ನು ಚಳಿಗಾಲದ ಅಧಿವೇಶನದ ಬಾಕಿ ಅವಧಿಯಿಂದ ಅಮಾನತು ಮಾಡಲಾಗಿದೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಮಂಡಿಸಿದ ಸಂಸದರ ಅಮಾನತು ನಿಲುವಳಿಯು, ಧ್ವನಿ ಮತದ ಮೂಲಕ ಅಂಗೀಕಾರಗೊಂಡಿತು.
ಗದ್ದಲ ಉಂಟಾದ ಕಾರಣ ಸದನವನ್ನು ನಾಳೆಗೆ ಮುಂದೂಡಲಾಗಿದೆ.
ಶಾ ಹೇಳಿಕೆಗೆ ಪಟ್ಟು
ಡಿಸೆಂಬರ್ 13ರಂದು ಉಂಟಾದ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಕ್ರಿಯಿಸಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ.
ಇದೇ ವಿಚಾರವಾಗಿ ಡಿಸೆಂಬರ್ 14ರಂದು ಪ್ರತಿಭಟಿಸಿದ್ದ ರಾಜ್ಯಸಭೆ ಮತ್ತು ಲೋಕಸಭೆಯ 14 ಸಂಸದರನ್ನು 'ಅನುಚಿತ ವರ್ತನೆ' ತೋರಿದ ಆರೋಪದಲ್ಲಿ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ.
ಈವರೆಗೆ ಒಟ್ಟು 47 ಸಂಸದರು ಅಮಾನತು ಆಗಿದ್ದಾರೆ. ಈ ಪೈಕಿ ಟಿಎಂಸಿ ನಾಯಕ ಡೆರೆಕ್ ಒಬ್ರಯಾನ್ ಮಾತ್ರವೇ ರಾಜ್ಯಸಭೆ ಸದಸ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.