ADVERTISEMENT

ಭದ್ರತಾ ಲೋಪ: ಆರೋಪಿಯೊಬ್ಬರಿಗೆ ಎಫ್‌ಐಆರ್ ಪ್ರತಿ ನೀಡುವುದಕ್ಕೆ ತಡೆ

ಪಿಟಿಐ
Published 22 ಡಿಸೆಂಬರ್ 2023, 15:48 IST
Last Updated 22 ಡಿಸೆಂಬರ್ 2023, 15:48 IST
<div class="paragraphs"><p>ಲೋಕಸಭೆಯಲ್ಲಿ ಭದ್ರತಾ ಲೋಪ</p></div>

ಲೋಕಸಭೆಯಲ್ಲಿ ಭದ್ರತಾ ಲೋಪ

   

ನವದೆಹಲಿ: ಸಂಸತ್ತಿನ ಭದ್ರತಾ ಲೋಪ ಪ್ರಕರಣದ ಆರೋಪಿಯೊಬ್ಬರಿಗೆ ಎಫ್‌ಐಆರ್‌ ಪ್ರತಿ ನೀಡುವಂತೆ ವಿಚಾರಣಾ ನ್ಯಾಯಾಲಯವೊಂದು ಪೊಲೀಸರಿಗೆ ನೀಡಿದ್ದ ಆದೇಶಕ್ಕೆ ದೆಹಲಿ ಹೈಕೋರ್ಟ್‌ ಶುಕ್ರವಾರ ತಡೆಯಾಜ್ಞೆ ನೀಡಿದೆ.

ಭದ್ರತಾ ಲೋಪವು ಸೂಕ್ಷ್ಮ ಸ್ವರೂಪವನ್ನು ಹೊಂದಿದೆ. ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಲೈಂಗಿಕ ದೌರ್ಜನ್ಯ, ಭಯೋತ್ಪಾದನೆ ಮತ್ತು ಅದಕ್ಕೆ ಸಂಬಂಧಿಸಿದ ಪ್ರಕರಣಗಳು ಹಾಗೂ ಪೋಕ್ಸೊ ಕಾಯ್ದೆ ವ್ಯಾಪ್ತಿಗೆ ಬರುವ ಪ್ರಕರಣಗಳಲ್ಲಿ ಎಫ್‌ಐಆರ್ ಪ್ರತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಅಗತ್ಯವಿಲ್ಲ ಎಂದು ಪೊಲೀಸರ ಪರ ವಕೀಲರು ಕೋರ್ಟ್‌ಗೆ ತಿಳಿಸಿದರು.

ADVERTISEMENT

ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮ ಅವರು ಆರೋಪಿ ನೀಲಂ ದೇವಿ ಅವರಿಗೆ ನೋಟಿಸ್ ಜಾರಿಗೆ ಆದೇಶಿಸಿದ್ದಾರೆ. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪೊಲೀಸರು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಇಂತಹ ಪ್ರಕರಣಗಳಲ್ಲಿ ಎಫ್‌ಐಆರ್ ಪ್ರತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಅಗತ್ಯವಿಲ್ಲ. ಅಲ್ಲದೆ, ನಿರ್ದಿಷ್ಟ ಪ್ರಕ್ರಿಯೆಯನ್ನು ಪಾಲಿಸದೆ ಎಫ್‌ಐಆರ್‌ ಪ್ರತಿಯನ್ನು ಆರೋಪಿಗೆ ನೀಡುವ ಅಗತ್ಯ ಇಲ್ಲ ಎಂದು ಹೈಕೋರ್ಟ್‌ ಹೇಳಿದೆ.

ಸೂಕ್ಷ್ಮ ಪ್ರಕರಣಗಳಲ್ಲಿ ಎಫ್‌ಐಆರ್ ಪ್ರತಿ ಬೇಕಿದ್ದರೆ, ಆರೋಪಿಗಳು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಬೇಕು. ಮನವಿಯನ್ನು ಪರಿಶೀಲಿಸಲು ಆಯುಕ್ತರು ಸಮಿತಿಯೊಂದನ್ನು ರಚಿಸುತ್ತಾರೆ. ಈ ಪ್ರಕ್ರಿಯೆಯ ಮೂಲಕ ಎಫ್‌ಐಆರ್ ಪ್ರತಿ ಪಡೆಯಲು ಸಾಧ್ಯವಾಗದಿದ್ದಾಗ ಮಾತ್ರ ಆರೋಪಿಗಳು ಕೋರ್ಟ್‌ ಮೊರೆ ಹೋಗಬಹುದು ಎಂದು ದೆಹಲಿ ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

ವಿಚಾರಣಾ ನ್ಯಾಯಾಲಯವು ನೀಲಂ ಅವರು ಸಲ್ಲಿಸಿದ್ದ ಅರ್ಜಿ ಆಲಿಸಿ, ಅವರ ಪರ ವಕೀಲರಿಗೆ ಎಫ್‌ಐಆರ್ ಪ್ರತಿಯನ್ನು ಒದಗಿಸುವಂತೆ ತನಿಖಾಧಿಕಾರಿಗೆ ಆದೇಶಿಸಿತ್ತು.

ಸೂಕ್ಷ್ಮ ಸ್ವರೂಪವನ್ನು ಹೊಂದಿಲ್ಲದ ಪ್ರಕರಣಗಳಲ್ಲಿ ಎಫ್‌ಐಆರ್‌ ಪ್ರತಿಯನ್ನು ಪೊಲೀಸ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್‌ 2016ರಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.