ADVERTISEMENT

ಭದ್ರತಾ ಲೋಪ: ಅಮಿತ್ ಶಾ ಹೇಳಿಕೆಗೆ ವಿಪಕ್ಷ ಪಟ್ಟು

ಗದ್ದಲ, ಪ್ರತಿಭಟನೆ: ಸಂಸತ್ತಿನ ಉಭಯ ಸದನಗಳಲ್ಲೂ ನಡೆಯದ ಕಲಾಪ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2023, 15:36 IST
Last Updated 15 ಡಿಸೆಂಬರ್ 2023, 15:36 IST
<div class="paragraphs"><p>ಸಂಸತ್ತಿನಲ್ಲಿ ಭದ್ರತಾ ಲೋಪ</p></div>

ಸಂಸತ್ತಿನಲ್ಲಿ ಭದ್ರತಾ ಲೋಪ

   

ನವದೆಹಲಿ: ಲೋಕಸಭೆಯಲ್ಲಿನ ಭದ್ರತಾ ವೈಫಲ್ಯದ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ನೀಡಬೇಕು ಎಂದು ಪಟ್ಟು ಹಿಡಿದು ವಿರೋಧ ಪಕ್ಷಗಳು ಗದ್ದಲ ಹಾಗೂ ಪ್ರತಿಭಟನೆ ನಡೆಸಿದ್ದರಿಂದ ಉಭಯ ಸದನಗಳ ಕಲಾಪ ಶುಕ್ರವಾರವೂ ನಡೆಯಲಿಲ್ಲ. 

ಬೆಳಿಗ್ಗೆ 11 ಗಂಟೆಗೆ ಕಲಾಪ ಆರಂಭವಾದ ಕೂಡಲೇ ಎರಡೂ ಸದನಗಳಲ್ಲಿ ವಿಪಕ್ಷಗಳ ಸದಸ್ಯರು ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿ ಶಾ ಹೇಳಿಕೆಗೆ ಆಗ್ರಹಿಸಿದರು. ಬುಧವಾರದ ಭದ್ರತಾ ವೈಫಲ್ಯದ ಕುರಿತು ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿದರು. ಸದನದೊಳಗೆ ನುಗ್ಗಿದ ಆರೋಪಿಗಳಿಗೆ ಪಾಸ್‌ ವ್ಯವಸ್ಥೆ ಮಾಡಿಕೊಟ್ಟ ಮೈಸೂರಿನ ಸಂಸದ ಪ್ರತಾಪಸಿಂಹ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ಬೇಡಿಕೆ ಮುಂದಿಟ್ಟರು.

ADVERTISEMENT

ಕಲಾಪವನ್ನು ಮಧ್ಯಾಹ್ನ 2ಕ್ಕೆ ಮುಂದೂಡಲಾಯಿತು. ಮಧ್ಯಾಹ್ನ ಕಲಾಪ ಶುರುವಾದ ಕೂಡಲೇ ವಿಪಕ್ಷಗಳ ಸದಸ್ಯರು ಗದ್ದಲ ಆರಂಭಿಸಿದರು. ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು. ರಾಜ್ಯಸಭೆಯ ಸಭಾಪತಿ ಜಗದೀಪ್‌ ಧನಕರ್ ಅವರು ಕರೆದಿದ್ದ ಸಭೆಗೂ ವಿಪಕ್ಷಗಳ ನಾಯಕರು ಗೈರಾದರು. ಭದ್ರತಾ ವೈಫಲ್ಯದ ವಿಷಯವನ್ನು ಮುಂದಿಟ್ಟುಕೊಂಡು ಸೋಮವಾರವೂ ಹೋರಾಟ ಮುಂದುವರಿಯಲಿದೆ ಎಂದು ವಿರೋಧ ಪಕ್ಷದ ಮೂಲಗಳು ತಿಳಿಸಿವೆ. 

ಚಳಿಗಾಲದ ಅಧಿವೇಶನದಿಂದ ಅಮಾನತುಗೊಂಡ ಲೋಕಸಭೆಯ 13 ಸಂಸದರು ಹಾಗೂ ರಾಜ್ಯಸಭೆಯ ಒಬ್ಬರು ಸಂಸದರು ಶಾ ಹೇಳಿಕೆಗೆ ಆಗ್ರಹಿಸಿ ಸಂಸತ್‌ನ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಶುಕ್ರವಾರ ಬೆಳಿಗ್ಗೆ ಮೌನ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಗೆ ಬೆಂಬಲ ನೀಡಿದರು. 

‘ಆರೋಪಿಗಳಿಗೆ ಪಾಸ್‌ ನೀಡಿದ ಪ್ರತಾಪಸಿಂಹ ಮುಕ್ತವಾಗಿ ಓಡಾಡುತ್ತಿದ್ದಾರೆ. ಭಾರತದ ಜನರ ಪರವಾಗಿ ಧ್ವನಿ ಎತ್ತಿದ್ದಕ್ಕಾಗಿ ನನ್ನನ್ನು ಹಾಗೂ ನನ್ನ ಸಹೋದ್ಯೋಗಿಗಳನ್ನು ಸದನದಿಂದ ಅಮಾನತುಗೊಳಿಸಲಾಗಿದೆ. ಸದನದಲ್ಲಿ ಪ್ರಧಾನಿ ಹಾಗೂ ಗೃಹ ಸಚಿವರು ಹೇಳಿಕೆ ನೀಡಬೇಕು ಎಂಬುದು ನಮ್ಮ ನೈಜ ಬೇಡಿಕೆ’ ಎಂದು ಅಮಾನತುಗೊಂಡಿರುವ ಸಂಸದ ಹಿಬಿ ಈಡನ್‌ ಹೇಳಿದರು. 

‘ಇಂಡಿಯಾ’ ಒಕ್ಕೂಟದ ನಾಯಕರು ಸಭೆ ಸೇರಿ ಭದ್ರತಾ ಲೋಪದ ಕುರಿತು ಚರ್ಚೆಗೆ ಒತ್ತಾಯಿಸಲು ನಿರ್ಧರಿಸಿದರು. 

‘ಈ ವಿಷಯದಲ್ಲಿ ಬಿಜೆಪಿ ಕುರಿತು ವಿರೋಧ ಪಕ್ಷದ ನಾಯಕರು ಜಾಗರೂಕರಾಗಿರಬೇಕು. ಇದನ್ನು ರಾಷ್ಟ್ರೀಯ ಭದ್ರತೆಯ ವಿಷಯವನ್ನಾಗಿ ಬಿಜೆಪಿಯವರು ಪರಿವರ್ತಿಸುವ ಸಾಧ್ಯತೆ ಇದೆ. ಜತೆಗೆ, ವಿರೋಧ ಪಕ್ಷದವರು ಸಹಕರಿಸುತ್ತಿಲ್ಲ ಎಂದು ಬಿಂಬಿಸಲೂಬಹುದು. ಎಚ್ಚರಿಕೆಯ ನಡೆ ಇಡಬೇಕು’ ಎಂದು ಕೆಲವು ಮುಖಂಡರು ಸಭೆಯಲ್ಲಿ ಕಿವಿಮಾತು ಹೇಳಿದರು ಎಂದು ಮೂಲಗಳು ಹೇಳಿವೆ. 

‘ಭದ್ರತಾ ವೈಫಲ್ಯದ ಕುರಿತು ಪ್ರಶ್ನೆ ಮಾಡಿದ ಸಂಸದರನ್ನು ಸದನದಿಂದ ಹೊರ ಹಾಕಲಾಗಿದೆ. ಇದು ಅನ್ಯಾಯದ ಪರಮಾವಧಿ. ಈ ಕುರಿತು ನಾವೆಲ್ಲ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಹಾಗೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಭೆಯಲ್ಲಿ ಹೇಳಿದರು ಎಂದು ಮೂಲಗಳು ತಿಳಿಸಿವೆ. 

ಬೆಳಿಗ್ಗೆ 11 ಗಂಟೆಗೆ ರಾಜ್ಯಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಜಗದೀಪ್‌ ಧನಕರ್‌, ‘ಭದ್ರತಾ ಲೋಪಕ್ಕೆ ಸಂಬಂಧಿಸಿದ ಗಂಭೀರ ಪರಿಸ್ಥಿತಿಯ ಕುರಿತು ಚರ್ಚೆಗೆ ಆಗ್ರಹಿಸಿ ನನಗೆ 23 ನೋಟಿಸ್‌ಗಳು ಬಂದಿವೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುತ್ತದೆ’ ಎಂದರು. 

ಈ ವಿಷಯದ ಕುರಿತು ಚರ್ಚಿಸಲು ಕೂಡಲೇ ಕಾಲಾವಕಾಶ ನೀಡಬೇಕು ಎಂಬ ವಿಪಕ್ಷ ಸದಸ್ಯರ ಬೇಡಿಕೆಯನ್ನು ಅವರು ಒಪ್ಪಲಿಲ್ಲ. ಸದಸ್ಯರು ಘೋಷಣೆಗಳನ್ನು ಕೂಗಿದರು. ಆಗ ಮಧ್ಯಪ್ರವೇಶಿಸಿದ ಸಭಾನಾಯಕ ಪೀಯೂಷ್‌ ಗೋಯಲ್, ಬೆಳಗಾವಿಯಲ್ಲಿನ ಮಹಿಳೆಯ ಬೆತ್ತಲೆ ಪ್ರಕರಣವನ್ನು ಉಲ್ಲೇಖಿಸಿದರು. ಕರ್ನಾಟಕದ ಕಾನೂನು ಸುವ್ಯವಸ್ಥೆ ಕುರಿತು ಮೊದಲು ಮಾತನಾಡಬೇಕು ಎಂದರು. 

‘ಭದ್ರತಾ ಲೋಪದ ಕುರಿತು ಶಾ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಆದರೆ, ಅವರು ಸದನದಲ್ಲಿ ಹೇಳಿಕೆ ನೀಡಲು ಸಿದ್ಧರಿಲ್ಲ. ಅವರು ಮೊದಲು ಹೇಳಿಕೆ ನೀಡಲಿ’ ಎಂದು ವಿಪಕ್ಷಗಳ ಸದಸ್ಯರು ಒತ್ತಾಯಿಸಿ ಸಭಾಪತಿ ಪೀಠದ ಎದುರು ಧರಣಿ ಮುಂದುವರಿಸಿದರು. ಗಲಾಟೆ ಹೆಚ್ಚಾದಾಗ ಸಭಾಪತಿಯವರು ಕಲಾಪವನ್ನು ಮುಂದೂಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.