ADVERTISEMENT

ಸಂಸತ್‌ ಭದ್ರತಾ ವೈಫಲ್ಯ ಪ್ರಕರಣ; ಮತ್ತಿಬ್ಬರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2023, 14:26 IST
Last Updated 21 ಡಿಸೆಂಬರ್ 2023, 14:26 IST
<div class="paragraphs"><p>ಸಂಸತ್ತಿನಲ್ಲಿ ಭದ್ರತಾ ಲೋಪ</p></div>

ಸಂಸತ್ತಿನಲ್ಲಿ ಭದ್ರತಾ ಲೋಪ

   

ನವದೆಹಲಿ: ಸಂಸತ್‌ನ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕರ್ನಾಟಕದ ಒಬ್ಬ ವ್ಯಕ್ತಿ ಸೇರಿ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ವಿಚಾರಣೆಗೆ ಒಳಪಟ್ಟ ಇಬ್ಬರಲ್ಲಿ ಒಬ್ಬರಾದ ಶ್ರೀಕೃಷ್ಣ ಜಗಳಿ ಕರ್ನಾಟಕದವರು. ಪ್ರಕರಣದ ಆರೋಪಿ ಮನೋರಂಜನ್‌ ಡಿ. ಅವರ ಸ್ನೇಹಿತ ಎನ್ನಲಾಗಿದೆ. ಮತ್ತೊಬ್ಬರು ಉತ್ತರ ಪ್ರದೇಶದವರು. ಪೊಲೀಸರ ತಂಡವೊಂದು ಅವರಿಬ್ಬರನ್ನು ಬುಧವಾರ ವಿಚಾರಣೆಗೆ ಒಳಪಡಿಸಿತು ಎಂದು ಪೊಲೀಸ್‌ ಮೂಲಗಳು ಹೇಳಿವೆ.

ADVERTISEMENT

ಜಗಳಿ ಅವರು ನಿವೃತ್ತ ಎಸ್‌ಪಿ ಮಗ. ಬೆಂಗಳೂರಿನ ಸಾಫ್ಟ್‌ವೇರ್‌ ಸಂಸ್ಥೆಯೊಂದರ ಉದ್ಯೋಗಿ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಅವರು ಮತ್ತು ಮನೋರಂಜನ್‌ ಒಂದೇ ಕೊಠಡಿಯಲ್ಲಿ ವಾಸವಿದ್ದರು ಎಂದು ಅವರ ಸಹೋದರಿ ಸ್ಪಂದನಾ ತಿಳಿಸಿದ್ದಾರೆ.

ಬಾಗಲಕೋಟೆಯ ತಮ್ಮ ಮನೆಯಿಂದ ಜಗಳಿಯನ್ನು ಬುಧವಾರ ರಾತ್ರಿ ವಶಪಡಿಸಿಕೊಂಡ ದೆಹಲಿ ಪೊಲೀಸರ ತಂಡವೊಂದು ಅವರನ್ನು ವಿಚಾರಣೆಗೆ ಒಳಪಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಆರೋಪಿಗಳು ತೆರೆದಿದ್ದ ‘ಭಗತ್‌ ಸಿಂಗ್‌ ಫ್ಯಾನ್‌ ಕ್ಲಬ್‌’ ಪುಟದಲ್ಲಿ ಈ ಇಬ್ಬರೂ ಸದಸ್ಯರಾಗಿದ್ದರು ಎಂಬ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಬಂಧನ ಅವಧಿ ಜ.5ರ ವರೆಗೆ ವಿಸ್ತರಣೆ

ಸಂಸತ್ತಿನ ಭದ್ರತಾ ಲೋಪ ಪ್ರಕರಣದ ನಾಲ್ವರು ಆರೋಪಿಗಳ ಪೊಲೀಸ್‌ ವಶದ ಅವಧಿಯನ್ನು ಜನವರಿ 5ರವರೆಗೆ ವಿಸ್ತರಿಸಿ ದೆಹಲಿಯ ನ್ಯಾಯಾಲಯವೊಂದು ಆದೇಶ ಹೊರಡಿಸಿದೆ.

ಆರೋಪಿಗಳಾದ ಮನೋರಂಜನ್‌ ಡಿ., ಸಾಗರ್‌ ಶರ್ಮಾ, ಅಮೋಲ್‌ ಧನರಾಜ್‌ ಶಿಂದೆ ಮತ್ತು ನೀಲಂ ದೇವಿ ಅವರನ್ನು ಏಳು ದಿನಗಳ ಅವಧಿಗೆ ಪೊಲೀಸ್‌ ವಶಕ್ಕೆ ನೀಡಲಾಗಿತ್ತು. ಅವಧಿಯನ್ನು ಇನ್ನೂ 15 ದಿನಗಳಿಗೆ ವಿಸ್ತರಿಸುವಂತೆ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶೆ ಹರದೀಪ್‌ ಕೌರ್‌ ಅವರು ಈ ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.