ADVERTISEMENT

ಇಂದು ಸಂಸತ್ ಪುನರಾರಂಭ: ನೀಟ್‌ ಪ್ರಸ್ತಾಪ; ವಾಕ್ಸಮರ ನಿರೀಕ್ಷೆ

ಪಿಟಿಐ
Published 30 ಜೂನ್ 2024, 23:47 IST
Last Updated 30 ಜೂನ್ 2024, 23:47 IST
<div class="paragraphs"><p>ಸಂಸತ್ ಭವನ</p></div>

ಸಂಸತ್ ಭವನ

   

ನವದೆಹಲಿ: ಸಂಸತ್ತಿನ ಕಲಾಪ ಸೋಮವಾರ ಪುನರಾರಂಭವಾಗಲಿದ್ದು, ‘ನೀಟ್‌’ ಅಕ್ರಮವನ್ನು ಮುಖ್ಯವಾಗಿ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ವಾಗ್ಯುದ್ಧ ನಡೆಸಲು ವಿರೋಧಪಕ್ಷಗಳು ಸಿದ್ಧತೆ ನಡೆಸಿದ್ದು, ಉಭಯ ಸದನಗಳು ವಾಕ್ಸಮರಕ್ಕೆ ವೇದಿಕೆಯಾಗುವ ಸಾಧ್ಯತೆಗಳಿವೆ. 

ನೀಟ್‌ ಅವ್ಯವಹಾರದ ಜೊತೆಗೆ, ಸೇನೆಗೆ ಯುವಜನರ ನೇಮಕಾತಿಯ ‘ಅಗ್ನಿಪಥ್’ ಯೋಜನೆ, ಹಣದುಬ್ಬರ ಸಮಸ್ಯೆ ಹಾಗೂ ಯುವಜನರನ್ನು ಕಾಡುತ್ತಿರುವ ನಿರುದ್ಯೋಗದ ಸಮಸ್ಯೆಗಳ ಕುರಿತೂ ವಿರೋಧಪಕ್ಷಗಳು ಪ್ರಮುಖವಾಗಿ ಗಮನಸೆಳೆಯುವ ಸಾಧ್ಯತೆಗಳು ಇವೆ. 

ADVERTISEMENT

ಲೋಕಸಭೆಯಲ್ಲಿ ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು, ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಚರ್ಚೆ ಆರಂಭಿಸಲಿದ್ದು, ನಿರ್ಣಯವನ್ನು ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್‌ ಅವರು ಅನುಮೋದಿಸುವರು.

ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಲೋಕಸಭೆಯಲ್ಲಿ ಒಟ್ಟು 16 ಗಂಟೆ ಸಮಯ ನಿಗದಿಪಡಿಸಲಾಗಿದೆ. ಕೊನೆಯಲ್ಲಿ ಬಹುತೇಕ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ನೀಡಲಿದ್ದಾರೆ.

ವಂದನಾ ನಿರ್ಣಯದ ಮೇಲಿನ ಚರ್ಚೆಗೆ ರಾಜ್ಯಸಭೆಯಲ್ಲಿ 21 ಗಂಟೆ ನಿಗದಿಪಡಿಸಿದ್ದು, ಅಲ್ಲಿ ಬುಧವಾರದಂದು ಪ್ರಧಾನಿ ಉತ್ತರ ನೀಡಲಿದ್ದಾರೆ. ನೀಟ್‌ ಪರೀಕ್ಷೆಯ ಗೊಂದಲ ಈಗಾಗಲೇ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದ್ದು, ಕೋಲಾಹಲಕ್ಕೂ ಕಾರಣವಾಗಿದೆ. 

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಆಯೋಜಿಸಿದ್ದ ನೀಟ್–ಯುಜಿ ಪರೀಕ್ಷೆ ತೀವ್ರ ಗೊಂದಲಕ್ಕೆ ಕಾರಣವಾಗಿದೆ. ಬಿಹಾರದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಇತರೆಡೆಯೂ ಅಕ್ರಮಗಳು ನಡೆದಿವೆ. ಮೇ 5ರಂದು ನಡೆದಿದ್ದ ಪರೀಕ್ಷೆಗೆ 24 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.

ರಾಜ್ಯಸಭೆಯಲ್ಲಿ ವಂದನಾ ನಿರ್ಣಯದ ಮೇಲೆ ಚರ್ಚೆ ಆರಂಭಿಸಿದ್ದ ಬಿಜೆಪಿ ಸದಸ್ಯ ಸುಧಾಂಶು ತ್ರಿವೇದಿ, ‘ಮೋದಿ ಅವರಿಗೆ ಸರಿಸಾಟಿಯೇ ಇಲ್ಲ‘ ಎಂದು ಬಣ್ಣಿಸಿದ್ದರು. ಬಿಜೆಪಿಯ ಕವಿತಾ ಪಾಟಿದಾರ್ ನಿರ್ಣಯ ಅನುಮೋದಿಸಿದ್ದರು. ಚರ್ಚೆಯಲ್ಲಿ ಇತರೆ 9 ಸದಸ್ಯರು ಭಾಗಿಯಾಗಿದ್ದರು.

ವಂದನಾ ನಿರ್ಣಯಕ್ಕೂ ಮೊದಲು ನೀಟ್‌ ವಿಷಯ ಕುರಿತು ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿ ವಿರೋಧಪಕ್ಷಗಳು ರಾಜ್ಯಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿವೆ. ಚರ್ಚೆಗೆ ಆಗ್ರಹಿಸಿ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರ ಪೀಠದ ಎದುರಿಗೂ ಧಾವಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.