ADVERTISEMENT

ನೀಟ್‌ ಗೊಂದಲ | ಸರ್ಕಾರ, ವಿಪಕ್ಷ ಒಟ್ಟಾಗಿ ಸಂದೇಶ ನೀಡಬೇಕು: ರಾಹುಲ್‌

ಗೌರವಯುತ ಮತ್ತು ಉತ್ತಮ ಚರ್ಚೆಗೆ ಪ್ರಧಾನಿಗೆ ಮನವಿ

ಪಿಟಿಐ
Published 29 ಜೂನ್ 2024, 0:25 IST
Last Updated 29 ಜೂನ್ 2024, 0:25 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ನೀಟ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ದೇಶದ ಯುವಜನರ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮಬೀರುವುದರಿಂದ ಈ ವಿಚಾರದಲ್ಲಿ ಸಂಸತ್ತಿನಲ್ಲಿ ‘ಗೌರವಯುತ’ ಮತ್ತು ಉತ್ತಮ ಚರ್ಚೆಯಾಗಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ‍ಪ್ರಧಾನಿಯವರಿಗೆ ಶುಕ್ರವಾರ ಮನವಿ ಮಾಡಿದರು.

ಲೋಕಸಭಾ ಕಲಾಪ ಆರಂಭಕ್ಕೂ ಮುನ್ನ ಸಂಸತ್ತಿನ ಸಂಕೀರ್ಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿಯವರ ಭಾಷಣದ ಮೇಲಿನ ಚರ್ಚೆ ಕೈಗೆತ್ತಿಕೊಳ್ಳುವುದಕ್ಕೂ ಮೊದಲು ನೀಟ್‌ ವಿಚಾರ ಚರ್ಚಿಸಬೇಕು ಎಂದು ಒತ್ತಾಯಿಸಿದರು. 

‘ದೇಶದ ಯವಜನರು ಆತಂಕಗೊಂಡಿದ್ದಾರೆ. ಮುಂದೆ ಏನಾಗಲಿದೆ ಎಂಬುದು ಅವರಿಗೆ ಗೊತ್ತಿಲ್ಲ. ವಿದ್ಯಾರ್ಥಿಗಳ ಆತಂಕದ ಬಗ್ಗೆ ಚರ್ಚೆ ನಡೆಸುವಾಗ ಸರ್ಕಾರ ಮತ್ತು ವಿರೋಧ ಪಕ್ಷಗಳು ಒಟ್ಟಾಗಿವೆ ಎಂಬ ಸಂದೇಶ ಮತ್ತು ಭರವಸೆ ಸಂಸತ್ತಿನಿಂದ ಅವರಿಗೆ ತಲುಪಬೇಕು’ ಎಂದು ಅವರು ಹೇಳಿದರು. 

ADVERTISEMENT

ಪ್ರಸ್ತುತ ಸಂದರ್ಭದಲ್ಲಿ ನೀಟ್‌ ವಿಚಾರವೇ ಮುಖ್ಯ ಎಂದು ‘ಇಂಡಿಯಾ’ ಕೂಟ ಯೋಚಿಸುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದರು. 

ತಮಿಳುನಾಡಿಗೆ ವಿನಾಯಿತಿ: ನಿರ್ಣಯ ಅಂಗೀಕಾರ

ಚೆನ್ನೈ: ನೀಟ್‌ನಿಂದ ತಮಿಳುನಾಡಿಗೆ ವಿನಾಯಿತಿ ನೀಡಿ ದ್ವಿತೀಯ ಪಿಯುಸಿ ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳನ್ನು ವೈದ್ಯಕೀಯ ಕೋರ್ಸ್‌ಗಳಿಗೆ ದಾಖಲು ಮಾಡಲು ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ತಮಿಳುನಾಡಿನ ವಿಧಾನಸಭೆ ಶುಕ್ರವಾರ ಮತ್ತೊಮ್ಮೆ ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ. ಈ ನಿರ್ಣಯಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು ಕಲಾಪ ಬಹಿಷ್ಕರಿಸಿತು. ‘ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಮತ್ತು ನೀಟ್‌ ಬಗ್ಗೆ ರಾಜ್ಯಗಳಿಂದ ಹೆಚ್ಚುತ್ತಿರುವ ವಿರೋಧವನ್ನು ಪರಿಗಣಿಸಿ ರಾಷ್ಟ್ರವ್ಯಾಪಿ ನಡೆಸಲಾಗುವ ಈ ಪರೀಕ್ಷೆಯನ್ನು ರದ್ದುಪಡಿಸಬೇಕು ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂದು ನಿರ್ಣಯದಲ್ಲಿ ಹೇಳಲಾಗಿದೆ.  ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಮಂಡಿಸಿದ ನಿರ್ಣಯವನ್ನು ಬಿಜೆಪಿಯ ಮೈತ್ರಿ ಪಕ್ಷ ಪಿಎಂಕೆ ಬೆಂಬಲಿಸಿತು.

ಬಿಹಾರದಲ್ಲಿ ಕಠಿಣ ಕಾನೂನು: ಸಾಮ್ರಾಟ್‌

ಪಟ್ನಾ: ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ರಾಜ್ಯ ಸರ್ಕಾರ ಕಠಿಣ ಕಾನೂನು ಜಾರಿಗೆ ತರಲಿದೆ ಎಂದು ಬಿಹಾರ ಉ‍ಪ ಮುಖ್ಯಮಮತ್ರಿ ಸಾಮ್ರಾಟ್‌ ಚೌಧರಿ ಶುಕ್ರವಾರ ಹೇಳಿದ್ದಾರೆ.  ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ನಿರ್ದೇಶನದ ಅನ್ವಯ  ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಈ ಸಂಬಂಧ ಹೊಸ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದ್ದಾರೆ. ಜುಲೈ 22ರಿಂದ 26ರವರೆಗೆ ಬಿಹಾರದ ವಿಧಾನಸಭೆ ಅಧಿವೇಶದ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.