ನವದೆಹಲಿ: ಸಂಸತ್ ಭದ್ರತಾ ಲೋಪದ ಬಗ್ಗೆ ಪ್ರತಿಕ್ರಿಯೆ ನೀಡದ ಕೇಂದ್ರ ಸರ್ಕಾರದ ವಿರುದ್ಧ ಟಿಎಂಸಿಯ ರಾಜ್ಯಸಭಾ ಸಂಸದ ಡೆರೆಕ್ ಒಬ್ರಯಾನ್ ಹರಿಹಾಯ್ದಿದ್ದು, ‘ಸಂಸತ್ ಗಾಢ ಕಗ್ಗತ್ತಲ ಕೋಣೆಯಾಗಿ ಪರಿವರ್ತನೆಯಾಗಿದೆ’ ಎಂದು ಹೇಳಿದ್ದಾರೆ.
ಈ ಬಗ್ಗೆ ‘ಎಕ್ಸ್‘ ತಾಣದಲ್ಲಿ ಬರೆದುಕೊಂಡಿರುವ ಅವರು, 2001ರಲ್ಲಿ ಸಂಸತ್ ದಾಳಿ ನಡೆದ ವೇಳೆ, ಪ್ರಧಾನಿ ಹಾಗೂ ಗೃಹ ಸಚಿವರು ಸಂಸತ್‌ನಲ್ಲಿ ಹೇಳಿಕೆ ನೀಡಿದ್ದರು ಎಂದು ಹೇಳಿದ್ದಾರೆ.
ಅವರ ಪೋಸ್ಟ್ ಹೀಗಿದೆ;
‘2001ರ ಸಂಸತ್ ದಾಳಿ: ಮೂರು ದಿನ. ಸಂಸತ್‌ನಲ್ಲಿ ಪೂರ್ತಿ ಚರ್ಚೆ. ಪ್ರಧಾನಿ ರಾಜ್ಯಸಭೆಯಲ್ಲಿ ಮಾತನಾಡಿದ್ದರು. ಗೃಹ ಸಚಿವ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದರು’.
‘2023ರ ಭದ್ರತಾ ಲೋಪ: ಸರ್ಕಾರದ ಮೌನ. ಚರ್ಚೆ ಮತ್ತು ಗೃಹ ಸಚಿವರ ಪ್ರತಿಕ್ರಿಯೆಗೆ ಆಗ್ರಹಿಸಿದ 146 ಸಂಸದರ ಅಮಾನತು. ಸಂಸತ್ ಗಾಢ ಕತ್ತಲ ಕೋಣೆಯಾಗಿ ಪರಿವರ್ತನೆಯಾಯಿತು’ ಎಂದು ಬರೆದುಕೊಂಡಿದ್ದಾರೆ.
ಡಿ.13ರಂದು ಶೂನ್ಯವೇಳೆ ನಡೆಯುತ್ತಿರುವಾಗ, ಲೋಕಸಭೆಯ ವೀಕ್ಷಕರ ಗ್ಯಾಲರಿಯಲ್ಲಿದ್ದ ಇಬ್ಬರು ಯುವಕರು ಕೆಳಗೆ ಹಾರಿದ್ದರು. ಘೋಷಣೆಗಳನ್ನು ಕೂಗಿ, ಸ್ಮೋಕ್ ಕ್ಯಾನ್‌ನಿಂದ ಹೊಗೆ ಹಾರಿಸಿದ್ದರು. ಅವರನ್ನು ಸಂಸದರೇ ಹಿಡಿದಿದ್ದರು.
ಈ ಘಟನೆ ಬಳಿಕ ವಿರೋಧ ಪಕ್ಷಗಳ ಸಂಸದರು ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟಿಸಿದ ಲೋಕಸಭೆಯ 10 ಹಾಗೂ ರಾಜ್ಯಸಭೆಯ 46 ಸಂಸದರನ್ನು ಅಮಾನತು ಮಾಡಲಾಗಿತ್ತು. ಡೆರೆಕ್ ಒಬ್ರಯಾನ್ ಅಮಾನತಾದವರಲ್ಲಿ ಮೊದಲಿಗರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.