ನವದೆಹಲಿ: ರಾಜ್ಯಸಭೆಯ 12 ಸದಸ್ಯರ ಅಮಾನತು ಖಂಡಿಸಿ, ವಿರೋಧ ಪಕ್ಷಗಳ ಸದಸ್ಯರು ಸಂಸತ್ ಭವನದ ಸಮೀಪದಲ್ಲಿರುವ ಗಾಂಧೀಜಿ ಪ್ರತಿಮೆಯ ಮುಂದೆ ಗುರುವಾರವೂ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರೂ ಗುರುವಾರ ಧರಣಿಯಲ್ಲಿ ಭಾಗಿಯಾಗಿದ್ದಾರೆ. ಅಮಾನತು ಆದೇಶ ಪ್ರಕಟವಾದಾಗಿನಿಂದಲೇ 12 ಮಂದಿ ಸಂಸದರು ಗಾಂಧೀಜಿ ಪ್ರತಿಮೆ ಮುಂದೆ ದರಣಿ ನಡೆಸುತ್ತಿದ್ದಾರೆ.
ಧರಣಿ ನಿರತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ ಮತ್ತು ಅಮಾನತು ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದ್ದಾರೆ.
ಮುಂಗಾರು ಅಧಿವೇಶನದಲ್ಲಿ ‘ಅಶಿಸ್ತಿನ ನಡವಳಿಕೆ’ ತೋರಿದ್ದ ಆರೋಪದಲ್ಲಿ ವಿರೋಧ ಪಕ್ಷಗಳ 12 ಸದಸ್ಯರನ್ನು ಚಳಿಗಾಲದ ಅಧಿವೇಶನದ ಅವಧಿಗೆ ಅಮಾನತು ಮಾಡಿ ರಾಜ್ಯಸಭೆ ಸಭಾಪತಿ ವೆಂಕಯ್ಯನಾಯ್ಡು ಆದೇಶಿಸಿದ್ದರು. ಆದರೆ, ನಿಯಮಗಳು ಮತ್ತು ಪೂರ್ವ ನಿದರ್ಶನಗಳನ್ನು ಉಲ್ಲಂಘಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿರೋಧ ಪಕ್ಷಗಳು ಹೇಳಿವೆ.
ಟಿಆರ್‌ಎಸ್ ಪ್ರತಿಭಟನೆ: ಟಿಆರ್‌ಎಸ್ ಸದಸ್ಯರು ರೈತರಿಗೆ ಸಂಬಂಧಿಸಿದ ವಿಚಾರಗಳನ್ನು ಮುಂದಿಟ್ಟುಕೊಂಡು ಲೋಕಸಭೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದ್ದಾರೆ. ಅವರು ಘೋಷಣೆಗಳನ್ನು ಕೂಗಿ, ಫಲಕಗಳನ್ನು ಪ್ರದರ್ಶಿಸಿದ್ದಾರೆ. ಸಭಾತ್ಯಾಗಕ್ಕೆ ಮೊದಲು, ಸ್ಪೀಕರ್ ಪೀಠದ ಎದುರುಫಲಕ ಎಸೆದರು.
ಟಿಆರ್‌ಎಸ್ ಸದಸ್ಯರು ಸತತ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಶ್ನಾ ವೇಳೆ ಆರಂಭವಾಗಿ ಕೆಲವೇ ನಿಮಿಷಗಳಲ್ಲಿ ಟಿಆರ್‌ಎಸ್ ಸದಸ್ಯರು ಸ್ಪೀಕರ್ ಪೀಠದ ಮುಂದೆ ಜಮಾಯಿಸಿದರು.
ವರದಿಗಾರಿಕೆ ನಿರ್ಬಂಧ: ಟಿಎಂಸಿ ಆಕ್ಷೇಪ
ನವದೆಹಲಿ (ಪಿಟಿಐ): ‘ಸಂಸತ್ತಿನ ಕಾರ್ಯಕಲಾಪಗಳನ್ನು ವರದಿ ಮಾಡಲು ಮಾಧ್ಯಮ ಪ್ರತಿನಿಧಿಗಳಿಗೆ ಮುಕ್ತ ಪ್ರವೇಶ ಇರಬೇಕು. ಈಗ ಇರುವ ನಿರ್ಬಂಧಿತ ಪ್ರವೇಶವನ್ನು ತೆಗೆದುಹಾಕಬೇಕು. ಈ ವಿಚಾರದಲ್ಲಿ ಟಿಎಂಸಿಯು ಮಾಧ್ಯಮಪ್ರತಿನಿಧಿಗಳ ಪರವಾಗಿ ನಿಲ್ಲುತ್ತದೆ’ ಎಂದು ಟಿಎಂಸಿ ಹೇಳಿದೆ.
‘ಸಂಸತ್ತಿನ ಕಾರ್ಯಕಲಾಪಗಳ ವರದಿಗಾರಿಕೆಗೆ ನಿರ್ಬಂಧಿತ ಪ್ರವೇಶ ನೀಡುವುದು, ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು. ತಕ್ಷಣವೇ ಈ ನಿರ್ಬಂಧವನ್ನು ತೆಗೆದುಹಾಕಬೇಕು’ ಎಂದು ಸರ್ಕಾರವನ್ನು ಟಿಎಂಸಿ ಆಗ್ರಹಿಸಿದೆ.
‘180 ದೇಶಗಳ ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತವು ಈ ಮೊದಲು 136ನೇ ಸ್ಥಾನದಲ್ಲಿತ್ತು. ಈಗ 142ನೇ ಸ್ಥಾನಕ್ಕೆ ಕುಸಿದಿದೆ’ ಎಂದು ಟಿಎಂಸಿ ಹೇಳಿದೆ.
ಸಭಾಪತಿ ಮಾತಿನ ಮಧ್ಯೆ ಗದ್ದಲ
ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅವರು 12 ಸದಸ್ಯರ ಅಮಾನತು ಕುರಿತಂತೆ ಮಾತನಾಡುವಾಗ ವಿರೋಧ ಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು. ಕಳೆದ ಮೂರು ದಿನಗಳಲ್ಲಿ ರಾಜ್ಯಸಭೆಯಲ್ಲಿ ಕಲಾಪ ನಡೆದೇ ಇಲ್ಲ ಎಂದು ನಾಯ್ಡು ಹೇಳಿದರು.
‘12 ಸದಸ್ಯರ ಅಮಾನತು ನಿರ್ಧಾರವು ಅಪ್ರಜಾಸತ್ತಾತ್ಮಕ ಎಂದು ಈ ಘನ ಸದನದ ಕೆಲವು ನಾಯಕರು ಮತ್ತು ಸದಸ್ಯರು ಹೇಳಿದ್ದಾರೆ. ಈ ವಾದದಲ್ಲಿ ಏನಾದರೂ ಹುರುಳು ಇದೆಯೇ ಎಂದು ಅರ್ಥ ಮಾಡಿಕೊಳ್ಳಲು ಬಹಳ ಪ್ರಯತ್ನಿಸಿದ್ದೇನೆ. ಆದರೆ ಸಾಧ್ಯವಾಗಿಲ್ಲ’ ಎಂದು ನಾಯ್ಡು ಹೇಳಿದರು.
* ತಪ್ಪು ಮಾಡುವುದು ಮತ್ತು ಅದನ್ನು ತಿದ್ದಿಕೊಳ್ಳುವುದು ಮಾನವ ಸಹಜ ಗುಣ. ತಿದ್ದಿಕೊಳ್ಳಲು ಯಾರೂ ನಿರಾಕರಿಸಲಾಗದು. ತಪ್ಪನ್ನು ನಿರ್ಲಕ್ಷಿಸಬೇಕು ಎಂದು ಪಟ್ಟು ಹಿಡಿಯಲಾಗದು
-ವೆಂಕಯ್ಯ ನಾಯ್ಡು, ರಾಜ್ಯಸಭೆ ಸಭಾಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.